ಚಳ್ಳಕೆರೆ : ಸಮಾಜಮುಖಿ ಹಾಗೂ ಆಧ್ಯಾತ್ಮಕ ಜೀವನ ಕೃಷ್ಣಶಾಸ್ತಿಯವರ ವಿಶೇಷವಾಗಿತ್ತು ಎಂದು ಕನ್ನಡ ಉಪನ್ಯಾಸಕ ಎನ್.ಶಿವಾನಂದ ಹೇಳಿದ್ದಾರೆ.
ಅವರು ಬೆಳಗೆರೆ ನಾರಾಯಣಪುರ ಗ್ರಾಮದ ಶಾರದ ಮಂದಿರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಯವರ 107 ನೇ ಜನ್ಮದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣಶಾಸ್ತ್ರಿಗಳ ಜೀವನ ತೆರೆದ ಪುಸ್ತಕದಂತಿತ್ತು. ಅವರು ಸರಳ ಹಾಗೂ ಉದಾತ್ತ ಜೀವನ ಇಂದಿಗೂ ಅನುಕರಣೀಯವಾಗಿದೆ. ಸಮಾಜ ಸೇವೆ, ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆಧ್ಯಾತ್ಮ ಪ್ರಮುಖ ಅಂಶಗಳಾಗಿವೆ. ಬೆಳಗೆರೆ, ಹೆಗ್ಗೆರೆ ಮತ್ತು ಮೀರಸಾಬಿಹಳ್ಳಿ ಗ್ರಾಮಗಳಲ್ಲಿ ಶಾಲಾ ಕಟ್ಟಡ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿದರು. ಎಲ್ಲ ಸಂದರ್ಭಗಳಲ್ಲಿಯೂ ಸರಕಾರದಿಂದ ನೆರವು ಕೋರುವುದು ಸರಿಯಲ್ಲ ಎಂದು ಅವರು ತಮ್ಮ ಕಾರ್ಯಗಳಿಂದ ಪ್ರತಿಪಾದಿಸಿದರು.
ಬೆಳಗೆರೆ ನಾರಾಯಣ ಪುರದಲ್ಲಿ ಜನರ ಸಹಕಾರದಿಂದ ಸರಕಾರದ ಯಾವುದೇ ನೆರವಿಲ್ಲದೆ ಅಂದಿನ ದಿನಗಳಲ್ಲಿ ಶಾಲೆಯನ್ನು ಆರಂಭಿಸಿದ್ದರು. ತಮ್ಮ ತೋಟ, ಹೊಲದಲ್ಲಿ ಬೆಳೆದ ದವಸ,ಧಾನ್ಯಗಳನ್ನು ಬೆಳೆದು ಶಾಲೆಗಾಗಿ ಬಳಸಿದರು. ಅತ್ಯಂತ ಸರಳ, ಸಜ್ಜನಿಕೆಯ ಶಾಸ್ತ್ರಿಯವರು ಜಾತ್ಯಾತೀತವಾಗಿ ಎಲ್ಲ ಸಮುದಾಯಗಳ ಪ್ರೀತಿ ಪಾತ್ರರಾಗಿದ್ದರು. ಅಂತಹ ಗುಣಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು.
ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕ ಕೆ.ಚಿತ್ತಯ್ಯ ಮಾತನಾಡಿ, ಬೆಳಗೆರೆ ಜಾನಕಮ್ಮ ನವೋದಯ ಸಾಹಿತ್ಯ ಪ್ರಥಮ ಕವಯತ್ರಿಯಾಗಿದ್ದಾರೆ. ಅಂಥಹವರ ಬಗ್ಗೆ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸಿ ಇನ್ನಷ್ಟು ಅಧ್ಯಯನ ಅವಶ್ಯವಾಗಿದೆ. ಇತ್ತೀಚೆಗೆ ಚಳ್ಳಕೆರೆ ಕಾಲೇಜಿನಲ್ಲಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬೆಳಗೆರೆ ಜಾನಕಮ್ಮ ವಿಚಾರ ಸಂಕಿರಣ ಏರ್ಪಡಿಸಿದಾಗ ಸಾಕಷ್ಟು ಜನರಿಗೆ ಜಾನಕಮ್ಮನವರ ಪರಿಚಯವಾಯಿತು.
ಸ್ಥಳೀಯವಾಗಿದ್ದರೂ ನಮ್ಮೊಂದಿಗಿದ್ದ ಸಾಹಿತ್ಯ ಪ್ರತಿಭೆ ತಿಳಿಯದಾಗಿತ್ತು. ಯೇಗ್ದಾಗೆಲ್ಲಾ ಐತೆ ಕೃತಿಯಿಂದ ಬೆಳಗೆರೆ ಕೃಷ್ಣ ಶಾಸ್ತ್ರಿಯವರ ಸಾಹಿತ್ಯ ಹಾಗೂ ಆಧ್ಯಾತ್ಮ ಶಕ್ತಿಯನ್ನು ಪರಿಚಯಿಸುತ್ತದೆ. ಶಾಸ್ತ್ರಿಗಳು ನಿರ್ಮಿಸಿದ ಇಲ್ಲಿನ ಶಾಲೆಗೆ ಎಸ್.ಎಲ್.ಭೈರಪ್ಪ, ಎಂ.ಚಿದಾನಂದಮೂರ್ತಿ, ಎಸ್.ಕೆ.ಕರೀಂ ಖಾನ್, ನ್ಯಾಯಮೂರ್ತಿ ವೆಂಕಟಾಚಲಯ್ಯ ಸೇರಿದಂತೆ ಗಣ್ಯರು ಬಂದು ಶಾಸ್ತಿಗಳೊಂದಿಗೆ ಉಳಿದು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪ್ರಪಂಚವನ್ನು ಅರಿಯುತ್ತಿದ್ದರು. ನಾಡೋಜ ಪ್ರಶಸ್ತಿ ಪಡೆದ ಜಾನಪದ ಸಿರಿಯಜ್ಜಿಯನ್ನು ಕೃಷ್ಣ ಶಾಸ್ತ್ರಿಯವರು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಹೀಗಾಗಿ ಇಡೀ ಜಾನಪದ ಲೋಕ ಸಿರಿಯಜ್ಜಿಯನ್ನು ಗುರುತಿಸುವಂತಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾತನಾಡಿ, ಕೃಷ್ಣಶಾಸ್ತ್ರಿಯವರ ದಿನಾಚರಣೆಯನ್ನು ಅವರು ಸೇವೆ ಸಲ್ಲಿಸಿದ ಬೆಳಗೆರೆ ನಾರಾಯಣ ಪುರದಲ್ಲಿ ಆಚರಿಸುತ್ತಿರುವುದು ವಿಶೇಷವಾಗಿದೆ. ಸಾಹಿತ್ಯ ಹಾಗೂ ಆಧ್ಯಾತ್ಮಿಕ ಲೋಕದ ಹಲವಾರು ಶ್ರೇಷ್ಠ ವ್ಯಕ್ತಿಗಳು ಗ್ರಾಮಕ್ಕೆ ಆಗಮಿಸಿದ್ದಾರೆ.
ಗ್ರಾಮದಲ್ಲಿದ್ದ ಜಾನಕಮ್ಮ, ಚಂದ್ರಶೇಖರ ಶಾಸ್ತ್ರಿಯವರು ವಿಶೇಷ ಪಾಂಡಿತ್ಯವನ್ನು ಹೊಂದಿದ್ದರು. ರಾಷ್ಟ್ರ ಮಟ್ಟದ ಶ್ರೇಷ್ಠ ಶಿಕ್ಷಕ ಪುರಸ್ಕಾರವನ್ನು ರಾಷ್ಟ್ರಪತಿಗಳಿಂದ ಪಡೆದ ಅವರು ಇಂದಿನ ಶಿಕ್ಷಕರಿಗೆ ಆದರ್ಶರಾಗಿದ್ದಾರೆ ಎಂದು ಹೇಳಿದರು.
ಕೃಷ್ಣ ಶಾಸ್ತ್ರಿಯವರ ಬಹುಕಾಲದ ಒಡನಾಡಿ ಹಾಗೂ ಲೇಖಕ ಶ್ರೀಪಾದ ಪೂಜಾರ್ ಮಾತನಾಡಿ, ಶಾಸ್ತ್ರಿಯವರು ಧ್ಯಾನ ಮಾತ್ರ ಆಧ್ಯಾತ್ಮವಲ್ಲ. ಶುದ್ಧ ಮನಸ್ಸು, ಶ್ರಮದಾನ ಹಾಗೂ ಸಮಾಜ ಸೇವೆಯನ್ನು ತಮ್ಮ ಜೀವನದ ಮೂಲಕ ಪ್ರತಿಪಾದಿಸಿದ್ದರು. ಮಾತನಾಡುವ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಅವರೊಂದಿಗೆ 15 ವರ್ಷಗಳ ಕಾಲ ಒಡನಾಟ ಜೀವನಕ್ಕೆ ಸ್ಪೂರ್ತಿ ತುಂಬಿದೆ. ಅವರಲ್ಲಿದ್ದ ಆಧ್ಯಾತ್ಮಿಕ ಶಕ್ತಿಯಿಂದ ಸಂಸ್ಥೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಯಾದಿಗುಂಟೆ ಜಿ.ಸಿ.ಶಿವಣ್ಣನವರ ಕಾಲಮಾನದ ಸೊಗಡು ಕವನ ಸಂಕಲವನ್ನು ಬಿಡುಗಡೆ ಮಾಡಲಾಯಿತು. ಶ್ರೀ ಶಾರದ ಸಂಸ್ಥೆಯ ಆಡಳಿತಾಧಿಕಾರಿ ಕೆ.ರಾಜಣ್ಣ, ಮುಖ್ಯ ಶಿಕ್ಷಕ ವಿ.ಹೆಚ್.ವೀರಣ್ಣ, ಕಾರ್ಯಕ್ರಮದ ಸಂಚಾಲಕ ಚೌಳೂರು ಲೋಕೇಶ್, ಕಸಾಪ ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಸಂಸ್ಥೆಯ ಸಿಬ್ಬಂದಿಯಿದ್ದರು.