ಸುದ್ದಿಒನ್, ಚಿತ್ರದುರ್ಗ, ನವೆಂಬರ್.10 :ಚಿತ್ರದುರ್ಗ- ಕಾತ್ರಾಳು ಕೆರೆ ಏರಿ ಅಗಲ ಮಾಡಲು ಎರಡು ಕೋಟಿ ರುಪಾಯಿ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸದ ಸಿದ್ದೇಶ್ವರ ಈ ಸಂಬಂಧ ಅನುದಾನ ದೊರಕಿಸಿಕೊಡಲು ಯತ್ನಿಸಬೇಕೆಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭರಮಸಾಗರ ಏತ ನೀರಾವರಿ ಅನುಷ್ಠಾನಗೊಂಡಿರುವ 42 ಕೆರೆಗಳ ವೀಕ್ಷಣೆ ಪ್ರವಾಸ ಹಮ್ಮಿಕೊಂಡಿರುವ ಶ್ರೀಗಳು ಶುಕ್ರವಾರ ಕಾತ್ರಾಳು ಕೆರೆ ವೀಕ್ಷಿಸಿ, ಬಯಲು ಸೀಮೆ ಬಾಗಿನ ಅರ್ಪಿಸಿದ ತರುವಾಯ ಏರ್ಪಡಿಸಲಾದ ಅಚ್ಚುಕಟ್ಟುದಾರರ ಸಭೆಯಲ್ಲಿ ಮಾತನಾಡಿದರು. ಪ್ರಕೃತಿಯಲ್ಲಿ ನೀರಿಗೆ ಕೊರತೆ ಇಲ್ಲ. ಭಗವಂತ ಸ್ವಾರ್ಥಿ ಅಲ್ಲ, ಎಲ್ಲವನ್ನೂ ಕೊಟ್ಟಿದ್ದಾನೆ. ವಿತರಣೆ ಸರಿಯಾಗಿ ಆಗಬೇಕು. ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು.
ಕೆರೆ ತುಂಬಿತು ಅಂದ್ರೆ ಸಂಪತ್ತು ತಾನಾಗಿಯೇ ಬರುತ್ತದೆ. ರೈತರು, ಪಶುಪಕ್ಷಿ, ಪ್ರಾಣಿ ಎಲ್ಲರಿಗೂ ನೀರು ಬೇಕು. ನೀರಿಗೆ ಯಾವುದೇ ಜಾತಿ ಇಲ್ಲ. ಹಿಂದೆ ರಾಜ, ಮಹಾರಾಜರು, ಪಾಳೇಗಾರರಿಗೆ ಯಾರೂ ಅರ್ಜಿ ಹಾಕಿ ಕೆರೆ ಕಟ್ಟೆಗಳ ನಿರ್ಮಿಸಿ ಎಂದು ವಿನಂತಿಸಿರಲಿಲ್ಲ. ಅವರು ಚುನಾಯಿತ ಪ್ರತಿನಿಧಿಗಳೂ ಆಗಿರಲಿಲ್ಲ. ಆದರೆ, ಜನರ ಹಿತಕ್ಕಾಗಿ ಅವರು ಕೆರೆ ಕಟ್ಟೆ ಕಟ್ಟಿಸಿದ್ದಾರೆ. ಭರಮಸಾಗರ ಕೆರೆಯನ್ನು ಭರಮಣ್ಣನಾಯಕ ಕಟ್ಟಿಸಿದ್ದು ಈಗ ನೀರು ತುಂಬಿದೆ. ರೈತರು ಸಂತಸದಿಂದ ಇದ್ದಾರೆ ಎಂದರು.
ಭರಮಸಾಗರ ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಪ್ರತಿ ಕೆರೆಗೂ ಅದರದ್ದೇ ಆದ ಮಹತ್ವ ಇದೆ. ಭರಮಣ್ಣನಾಯಕ ಕೆರೆ 300 ವರ್ಷಗಳ ಬಳಿಕ ತುಂಬಿತು. ಕಾತ್ರಾಳು ಕೆರೆ 1902 ರಲ್ಲಿ ರಚನೆ ಅಯಿತು ಎಂದು ಹೇಳಲಾಗುತ್ತಿದೆ.ಇವೆಲ್ಲ ಮಾಹಿತಿಗಳು ಮುಂದಿನ ಪೀಳಿಗೆಗೆ ಬೇಕು.ಕೆರೆ ಯಾರು ನಿರ್ಮಿಸಿದರು, ಅದರ ವಿಸ್ತೀರ್ಣವೆಷ್ಟು ಎಂಬಿತ್ಯಾದಿ ಇತಿಹಾಸ ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ತರಳಬಾಳು ಮಠ ಇಚ್ಚಿಸಿದೆ. ಸಂಶೋಧಕರ ನೆರವು ಪಡೆದು ಲೇಖನ ಪೂರೈಸುವ ಜವಾಬ್ದಾರಿಯ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಗೆ ನೀಡಲಾಗಿದೆ ಎಂದು ತರಳಬಾಳು ಶ್ರೀ ಹೇಳಿದರು.
ಈಗ ಕೆರೆ ಏರಿ ಮುಂತಾದವುಗಳ ನಿರ್ಮಿಸಲು ಜೆಸಿಬಿ ಯಂತ್ರಗಳಿವೆ. ಅಂದು ಜನತೆ ದೈಹಿಕ ಶ್ರಮದಿಂದ ಕೆರೆ ಕಟ್ಟಿದ್ದಾರೆ. ಅವರಿಗೆ ಕೃತಜ್ಞರಾಗಿರಬೇಕು.ಕೆರೆಗಳಿಗೆ ನೀರು ಹರಿದು ಬಂದಿದ್ದು ದುಡಿಮೆಯ ಫಲವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಿ. ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಸುರಿಯಬೇಡಿ ಎಂದು ಶ್ರೀಗಳು ಸಲಹೆ ಮಾಡಿದರು.
ಸಂಸದ ಜಿಎಂ ಸಿದ್ದೇಶ್ವರ ಮಾತನಾಡಿ ತರಳಬಾಳು ಶ್ರೀಗಳ ಪ್ರಯತ್ನದಿಂದಾಗಿ ಹಲವು ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬಂದಿದೆ. ಉಬ್ರಾಣಿ, ಸಾಸಿವೆಹಳ್ಳಿ, ಜಗಳೂರು ಏತ ನೀರಾವರಿ ಅನುಷ್ಠಾನಕ್ಕೆ ಬಂದಿವೆ. ಬೇಲೂರು ಮತ್ತು ಹಳೆಬೀಡು ಪ್ರದೇಶದಲ್ಲು ಕೂಡ ಕೆರೆಗೆ ನೀರು ತಂದಿದ್ದಾರೆ.
ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಿವಿ ಹಿಂಡಿ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಸಾಸ್ವೇಹಳ್ಳಿ ಏತ ನೀರಾವರಿ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಕೊಂಚ ವಿಳಂಬವಾಗಿದೆ ಎಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಹೋರಾಟ ಕಟ್ಟಿ 25 ವರ್ಷಗಳಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರಕ್ಕೆ ಒತ್ತಾಯಗಳ ಮಾಡಿದರೂ ನಿಧಾನಗತಿಯಲ್ಲಿ ಸಾಗಿದೆ. ಆದರೆ ಯಾರೂ ಮನವಿ ಮಾಡದಿದ್ದರೂ, ಯಾರೊಬ್ಬ ರೈತರು ಪ್ರಸ್ತಾಪ ಮಾಡದಿದ್ದರೂ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಚಿಂತನೆ ಹಾಗೂ ಇಚ್ಚಾಶಕ್ತಿಯಿಂದಾಗಿ ಏತ ನೀರಾವರಿ ಯೋಜನೆ ರೂಪಿಸಿ ಸಾಕಾರಗೊಳಿಸಿದ್ದಾರೆ. 565 ಕೋಟಿ ರುಪಾಯಿ ವೆಚ್ಚದ ಯೋಜನೆ ಇದಾಗಿದ್ದು 42 ಕೆರೆಗಳಲ್ಲಿ ತುಂಗಭದ್ರೆ ನೀರು ಸಂಗ್ರಹವಾಗಿದೆ. ಉಪಕಾರ ಸ್ಮರಣೆ ಮಾಡುವ ಗುಣವ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್. ಕೆರೆ ವೀಕ್ಷಣೆ ಉಸ್ತುವಾರಿ ಜಿ.ಬಿ.ತೀರ್ಥಪ್ಪ, ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಮುಖಂಡ ಜಿ.ಬಿ.ಶೇಖರ್, ಕೋಟೆ ಶಿವಕುಮಾರ್, ಸತ್ಯನಾರಾಯಣರೆಡ್ಡಿ, ಡಾ.ಸಂಗೇನಹಳ್ಳಿ ಅಶೋಕ್ ಕು್ಮಾರ್, ರೈತ ಮುಖಂಡ ಹಿರೇಕಬ್ಬಿಗೆರೆ ನಾಗರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ,ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜ್, ನೇತ್ರ ತಜ್ಞ ಡಾ.ಉಜ್ಜಿನಪ್ಪ, ಬಿಜೆಪಿ ಮುಖಂಡ ನಂದಿ ನಾಗರಾಜ್, ನೀರಾವರಿ ಇಲಾಖೆ ಇಂಜಿನಿಯರುಗಳಾದ ಮಂಜುನಾಥ್, ಅಣ್ಣಪ್ಪ, ಇದ್ದರು.