ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಡಿ.04) : ಹಿರಿಯೂರಿನ ವಾಣಿವಿಲಾಸ ಸಾಗರ 89 ವರ್ಷಗಳ ನಂತರ ಭರ್ತಿಯಾಗಿರುವುದಕ್ಕೆ ಭದ್ರಾ ನೀರು ಹರಿದು ಬಂದಿರುವುದೇ ಕಾರಣ ಎನ್ನುವ ಸಂಭ್ರಮಕ್ಕಾಗಿ ಡಿ.27 ರಂದು ಭದ್ರೆಗೆ ಜನರ ಬಾಗಿನ ಸಮರ್ಪಣೆ ಮಾಡಲಾಗುವುದೆಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜಿ.ಎಸ್.ಉಜ್ಜಿನಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್, ಸೇರಿದಂತೆ ರೈತರು, ಕಾರ್ಮಿಕರು, ವಿವಿಧ ಸಂಘಟನೆಗಳು, ಹೋರಾಟಗಾರರನ್ನು ಆಹ್ವಾನಿಸಿ ಬಾಗಿನ ಅರ್ಪಿಸಲಾಗುವುದು. ಜಿಲ್ಲೆಯ ವಿವಿಧೆಡೆಗಳಿಂದ ಮೂರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಭಧ್ರಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಸ್ವಾಧೀನಪಡಿಸಿಕೊಂಡಿರುವವರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಹಾಗಾಗಿ ಭೂಮಿ ಕಳೆದುಕೊಂಡಿರುವ ಎಲ್ಲರಿಗೂ ಪರಿಹಾರ ನೀಡಬೇಕು. ಹಿರಿಯೂರಿನಿಂದ ಆರಂಭಗೊಳ್ಳುವ ಜಾಥ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು, ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿಯ ಸನ್ನಿಧಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಚಳ್ಳಕೆರೆ ಬಸವರಾಜ್ ಮಾತನಾಡಿ ಎಲ್ಲರ ಹೋರಾಟದಿಂದ ಹಿರಿಯೂರಿನ ವಾಣಿವಿಲಾಸಸಾಗರಕ್ಕೆ ಭದ್ರೆಯಿಂದ ನೀರು ಹರಿದು ಬಂದಿದೆ. ಅದಕ್ಕಾಗಿ ಇದೇ ತಿಂಗಳ 27 ರಂದು ಜನರ ಬಾಗಿನವನ್ನು ವಾಣಿವಿಲಾಸಸಾಗರಕ್ಕೆ ಅರ್ಪಿಸಲಾಗುವುದು. ಇದರಲ್ಲಿ ಯಾರೊಬ್ಬರ ಸ್ವಾರ್ಥವಿಲ್ಲ. ಜಿಲ್ಲೆಗೆ ನೀರು ಹರಿಯಲಿ ಎನ್ನುವುದು ಎಲ್ಲರ ಉದ್ದೇಶ ಎಂದು ಹೇಳಿದರು.
ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡುತ್ತ 25 ವರ್ಷಗಳ ನಿರಂತರ ಹೋರಾಟದ ಫಲವಾಗಿ ಜಿಲ್ಲೆಗೆ ಭದ್ರೆ ನೀರು ಬಂದಿದೆ. ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂ ಮಾಲೀಕರಿಗೆ ಪರಿಹಾರ ಕೊಡಿ. ನೀರಿಗಾಗಿ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಜಾಥ, ಸಂವಾದಗಳನ್ನು ನಡೆಸಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದೆಂದರು.
ರಾಜ್ಯದ ಮುಖ್ಯಮಂತ್ರಿ ಬಳಿ ನಿಯೋಗ ಹೋಗಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಸಂರಕ್ಷಿಸುವ ಕುರಿತು ಚರ್ಚಿಸಲಾಗುವುದು. ಇದಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದರು.
ಈ ಮಹೇಶ್‍ಬಾಬು, ಕೂನಿಕೆರೆ ರಾಮಣ್ಣ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.