ಸುದ್ದಿಒನ್, ಚಳ್ಳಕೆರೆ, (ಅ.16) : ಕುಟುಂಬಕ್ಕೆ ಗಂಡಾಗಲಿ, ಹೆಣ್ಣಾಗಲಿ ಒಂದೇ ಸಾಕು, ಮಕ್ಕಳಿಗೆ ಶಿಕ್ಷಣ ಕೊಡಿಸಿ, ಕೂಲಿ ಕಾರ್ಡ್ ಇದ್ದರೆ ಹೊಲಗಳಲ್ಲಿ ನರೇಗಾ ಯೋಜನೆ ಬದು ನಿರ್ಮಾಣ ಮಾಡಿಕೊಳ್ಳಿ, ನಿಮಗೂ ಕೆಲಸ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಗ್ರಾಮಸ್ಥೆ ಜಯಲಕ್ಷ್ಮೀ ಅವರಿಗೆ ಕಿವಿ ಮಾತು ಹೇಳಿದರು.
ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯ ಕ್ರಮದಲ್ಲಿ ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳು ಆಲಿಸಿ ಮಾತನಾಡಿದರು.
ಮನೆ ಮಂಜೂರು ಆದಮೇಲೆ ಮನೆಯ ಜೊತೆ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಆದರೆ ಶೌಚಾಲಯದ ಹಣವನ್ನು ಮನೆಗೆ ನಿರ್ಮಾಣ ಮಾಡಿಕೊಂಡರೆ ಹೇಗೆ..? ಹೆಣ್ಣು ಮಕ್ಕಳು ಸುರಕ್ಷವಾಗಿರಬೇಕು ಎಂದರೆ ಶೌಚಾಲಯ ಇರಬೇಕು. ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.
ಹೆಣ್ಣು ಮಕ್ಕಳಿಗೆ 18 ವರ್ಷಕ್ಕಿಂತ ಒಳಗೆ ಮದುವೆ ಮಾಡಬೇಡಿ, ಅದು ಅಸಿಂದು ಆಗುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರು ಸಹ ನನ್ನಂತೆ ಉನ್ನತ ಹುದ್ದೆ ಪಡೆಯಬಹದು ಎಂದು ಕಿವಿ ಮಾತು ಹೇಳಿದ ಅವರು ಹೆಣ್ಣನ್ನು ಸುರಕ್ಷಿತ ವಾಗಿ ಇಟ್ಟುಕೊಂಡರೆ ಸಾಲದು ಗಂಡು ಮಕ್ಕಳಿಗೆ ನೀತಿ ಪಾಠ ಮಾಡಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡರೆ ಚರಂಡಿ ನೀರು ಎಲ್ಲಿಗೆ ಹೋಗಬೇಕು ಒತ್ತುವರಿಯಾಗಿರುವ ಕಡೆ ತೆರವು ಮಾಡಿಸಿ ಚರಂಡಿ ಮಾಡಿಸಿ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಜಿಪಂ ಸಿಇಓ ಡಾ. ಕೆ.ನಂದಿನಿದೇವಿ, ತಹಶೀಲ್ದಾರ್ ಎನ್.ರಘುಮೂರ್ತಿ, ಜಿಲ್ಲಾ ಅಂಗವಿಕಲರ ಅಧಿಕಾರಿ ವೈಶಾಲಿ, ಗ್ರಾಪಂ ಅಧ್ಯಕ್ಷೆ ರಾಮಕ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ವಿರೂಪಾಕ್ಷಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಪ್ರೇಮಸುಧಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.