ಚಿತ್ರದುರ್ಗ: ಸದ್ಯದ ದೇಶದ ಸ್ಥಿತಿಗಳನ್ನು ಅವಲೋಕಿಸುತ್ತಾ ಹೋದರೆ ಸ್ವಾತಂತ್ರ್ಯಪೂರ್ವ ವಸಾಹತು ಶಾಹಿ ಪದ್ಧತಿಗೆ ನಾವು ಜಾರುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ಒಬ್ಬ ಸೃಜನಶೀಲ, ಜವಾಬ್ದಾರಿಯುತ ಲೇಖಕನಿಗರಿಬೇಕು ಎಂದು ಆರ್ಥಿಕ ತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯ ಪಟ್ಟರು.
ನಗರದ ಶಿವರಶರಣೆ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿತ್ರದುರ್ಗ ಹಾಗು ಮುಕ್ತವೇದಿಕೆ ಸಂಯುಕ್ತಾಶ್ರಯಲ್ಲಿ ಮಂಗಳವಾರ ನಡೆದ ಟಿ.ಎಸ್.ರಾಜೇಂದ್ರ ಪ್ರಸಾದ್ ತೇಕಲವಟ್ಟಿ ಅವರ ಸಾಹಿತ್ಯ ಕೃತಿಗಳ ಅವಲೋಕನ ಹಾಗು ಜಾನಪದ ತಜ್ಞ, ದಾವಣಗೆರೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾದ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳನ್ನು ನಾವು ಗಮನಿಸಿದರೆ ಸ್ವಾತಂತ್ರ್ಯಪೂರ್ವ ವಸಾಹತು ಶಾಹಿಗೆ ನಾವು ಹೋಗುತ್ತಿದ್ದೇವೆ ಎನ್ನುವ ಭ್ರಮೆ ನಮ್ಮ ಸದಾ ಕಾಡುತ್ತಿದೆ. ಆ ಭ್ರಮೆ ಭ್ರಮೆಯಾಗೇ ಉಳಿದರೆ ಒಳಿತು. ಇಲ್ಲವಾದಲ್ಲಿ ಸಾಮಾನ್ಯನ ಬದುಕು ದುಸ್ತರವಾಗುತ್ತದೆ ಎಂದು ವಿಷಾದಿಸಿದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯುಳ್ಳ ಲೇಖಕನ ಜವಾಬ್ದಾರಿಯೆಂದರೆ, ಸಮಾಜಕ್ಕೆ ಹಿಡಿಯುವ ಕನ್ನಡಿ ಮತ್ತೊಂದು ಅಂತರಂಗಕ್ಕೆ ಹಿಡಿಯುವ ಕನ್ನಡಿಯಾಗಿದೆ.
ಸಮುದಾಯದ ಸಮಸ್ಯೆಗಳನ್ನು ಲೇಖಕ ತನ್ನ ಸಾಹಿತ್ಯದ ಮುಖೇನ ಪ್ರಸ್ತುತಪಡಿಸಬೇಕಾಗಿದೆ ಎಂದು ರಾಜೇಂದ್ರ ಪ್ರಸಾದ್ ಅವರ ಗದ್ಯಕೃತಿಗಳನ್ನು ಅವಲೋಕಿಸುತ್ತಾ ಹೇಳಿದರು.
ಪದ್ಯಕೃತಿಗಳನ್ನು ಅವಲೋಕನ ಮಾಡಿ ಮಾತನಾಡಿದ ಸಾಹಿತಿ ಡಾ.ಮೀರಾಸಾಬಿಹಳ್ಳಿ ಸಿ.ಶಿವಲಿಂಗಪ್ಪ, ಕಾವ್ಯವನ್ನು ಹಿಡಿಯಾಗಿ ಹೇಳುವುದು ಕಷ್ಟವಾಗುತ್ತದೆ. ಸುಮಾರು 1200ಕ್ಕೂ ಹೆಚ್ಚು ಕವನಗಳನ್ನು ಅವಲೋಕಿಸುವುದೆಂದರೆ ಸುಲಭದ ಮಾತಲ್ಲ. ಆದರೂ ಅವರ ಕಾವ್ಯಕೃತಿಗಳಲ್ಲಿ ಬಂಡಾಯ ಪ್ರಜ್ಞೆ, ಸಾಮಾಜಿಕ ಹೊಣೆಗಾರಿಕೆ, ತಳಸ್ಥರದ ಜೀವನ ಚಿತ್ರಣ ರಾಜೇಂದ್ರಪ್ರಸಾದ್ ಕಾವ್ಯಗಳಲ್ಲಿ ಕಂಡು ಬರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ರಂಗನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆರ್ಥಿಕ ಚಿಂತಕ ಪ್ರೋ.ಲಿಂಗಪ್ಪ ಆಶಯ ನುಡಿಗಳನ್ನಾಡಿ, ಬರವಣಿಗೆ ಎನ್ನುವುದು ಜೀವ ದ್ರವ್ಯ, ಜೀವನದ ದ್ರವ್ಯವಾಗಬೇಕು. ಆ ಪಂಥ, ಈ ಪಂಥ ಎನ್ನದಲೆ ಮನುಷ್ಯ ಪಂಥದ ಅಂತಃಸತ್ವ ಲೇಖಕನಿಗಿರಬೇಕು ಅಂತಹ ಶಕ್ತಿ ರಾಜೇಂದ್ರಪ್ರಸಾದ್ ಕೃತಿಗಳಲ್ಲಿ ನಾವು ಕಾಣಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ವಹಿಸಿದ್ದರು. ರಾಜೇಂದ್ರ ಪ್ರಸಾದ್ ಹಾಗು ಮೀರಾಸಾಬಿಹಳ್ಳಿ ಶಿವಣ್ಣನವರ ಅಭಿನಂದನಾ ನುಡಿಗಳನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಪತ್ರಕರ್ತ ಉಜ್ಜಿನಪ್ಪ, ಮುಕ್ತವೇದಿಕೆಯ ಪ್ರೊ.ಜಿ.ಪರಮೇಶ್ವರಪ್ಪ, ಕಾರ್ಯಕ್ರಮವನ್ನು ಕುರಿತು ಮಾತನಾಡಿದರು ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ಹಿರಿಯೂರು ತಾಲ್ಲೂಕು ಕಸಾಪ ಅಧ್ಯಕ್ಷ ನಾಗೇಶ್, ಹೊಸದುರ್ಗ ಕಸಾಪ ಅಧ್ಯಕ್ಷ ಓಂಕಾರಪ್ಪ ಮತ್ತಿತರರಿದ್ದರು.