ಚಿತ್ರದುರ್ಗ, (ಜೂ.19) : ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜೂನ್ 21 ರಂದು ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ಯೋಗ ತರಬೇತಿ ಕೇಂದ್ರಗಳು, ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಭಾನುವಾರ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಯೋಗಾ ನಡಿಗೆ ಜಾಥಾಕ್ಕೆ ಜಿ.ಪಂ.ಸಿ.ಇ.ಓ ಡಾ.ನಂದಿನಿದೇವಿ ಚಾಲನೆ ನೀಡಿದರು.
ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಯೋಗಾಸಕ್ತರು, ನಮ್ಮ ನಡೆ ಯೋಗದ ಕಡೆಗೆ ಎನ್ನುವ ಬ್ಯಾನರ್ ಹಿಡಿದು, ‘ಯೋಗ ಮಾಡಿ ರೋಗ ಓಡಿಸಿ’ ‘ಯೋಗಾ ಉಚಿತ ಆರೋಗ್ಯ ಖಚಿತ’ ‘ಯೋಗ ಮಾಡಿ ನಿರೋಗಿ ಯಾಗಿ’ ಎಂದು ಘೋಷಣೆ ಕೂಗುತ್ತಾ ಜನರಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸಿದರು.
ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾವು, ಓನಕೆ ಓಬವ್ವ ವೃತ್ತ, ಮದಕರಿ ನಾಯಕ ವೃತ್ತ, ಜೋಗಿಮಟ್ಟಿ ಸರ್ಕಲ್, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಉಚ್ಚಂಗಿ ಎಲ್ಲಮ್ಮ ದೇವಸ್ಥಾನ, ಚಿಕ್ಕಪೇಟೆ, ಆನೆ ಬಾಗಿಲು, ಗಾಂಧಿ ವೃತ್ತದ ಮಾರ್ಗವಾಗಿ, ಎಸ್.ಬಿ.ಐ ವೃತ್ತದ ಮೂಲಕ ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಮಾಪ್ತಿಯಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರೀಶ್.ಯು, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳಾದ ಪತಾಂಜಲಿ ಯೋಗ ಶಿಕ್ಷಣ ಸಂಸ್ಥೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ,
ಮಹರ್ಷಿ ಯೋಗ ಸಂಸ್ಥೆ, ಆರ್ಟ್ ಆಪ್ ಲಿವಿಂಗ್‌ನ ರವಿ ಶಂಕರ್ ಯೋಗ ಸಂಸ್ಥೆ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘ, ಸ್ವರ್ಣಿಮ ಯೋಗ ಸಂಸ್ಥೆ, ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.