ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.04 : ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತು ನಾಡಸೇವೆಯಲ್ಲಿ ಭಾಗಿಯಾಗಿದ್ದ ಅರ್ಜುನ (65) ಆನೆಯು ಸೋಮವಾರ ಕಾಡಾನೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದ್ದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ತೀವ್ರ ಸಂತಾಪ ಸೂಚಿಸಿದೆ.
ಈ ಹಿಂದೆ ಅನೇಕ ಪುಂಡಾನೆಗಳನ್ನು ಸೆರೆಹಿಡಿಯುವಲ್ಲಿ ಅರ್ಜುನ ಪ್ರಮುಖ ಪಾತ್ರವಹಿಸಿದ್ದ ಮತ್ತು ಸಕ್ರೆಬೈಲು ಆನೆ ಬಿಡಾರ ದಲ್ಲಿ ಅರ್ಜುನ ಹಿಡಿದ ಅನೇಕ ಕಾಡಾನೆಗಳು ಇವೆ.
22 ವರ್ಷಗಳ ಕಾಲ ದಸರಾದಲ್ಲಿ ಭಾಗವಹಿಸಿದ್ದ ಸಾಕಾನೆ ಅರ್ಜುನ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ. ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದು ಇಲ್ಲಿವರೆಗೂ ಆತನ ಸೇವೆ ಅವಿಸ್ಮರಣೀಯ. 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.
ಇತ್ತಿಚೆಗೆ ಕಾಡಾನೆಗಳ ಉಪಟಳ ಹೆಚ್ಚಾಗಿತ್ತು, ಅದನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಹರಸಾಹಸ ಮಾಡಿತ್ತು. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಪುಂಡಾನೆಯನ್ನು ಸೆರೆಹಿಡಿಯಲು ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಿಢೀರ್ ದಾಳಿ ಮಾಡಿದೆ.
ಒಂಟಿಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಆದರೆ, ಅರ್ಜುನ ಮಾತ್ರ ಒಂಟಿಸಲಗದ ಜೊತೆ ಕಾಳಗಕ್ಕಿಳಿದಿದ್ದು ಕೊನೆಯಲ್ಲಿ ಮೃತಪಟ್ಟಿರುವುದು ಈ ನಾಡಿಗೆ ತುಂಬಲಾರದ ನಷ್ಟ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ . ರಾಜ್ಯ ಸಂಚಾಲಕ ಟಿ. ರುದ್ರಮುನಿ, ಉಪಾಧ್ಯಕ್ಷರಾದ ಅಂಬಿಕಾ, ಗ್ರೀನ್ ಕರ್ನಾಟಕ ಟೀಮ್ ಕಮಿಷನರ್ ಡಾ.ಎಂ.ಸಿ.ನರಹರಿ, ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಯೋಜನಾ ನಿರ್ದೇಶಕ ಎಸ್. ರಾಘವೇಂದ್ರ, ವನ್ಯಜೀವಿ ಛಾಯಾಗ್ರಾಹಕ ನಾಗು ಆರ್ಟ್ಸ್ ನಾಗರಾಜ್, ಪ್ರಾಣಿ ಸಂರಕ್ಷಕಿ ಸ್ಫೂರ್ತಿ ಮತ್ತು ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಮತ್ತು ಅನೇಕರು ಸಂತಾಪ ಸೂಚಿಸಿದ್ದಾರೆ.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ. ಅರ್ಜುನನು 2012 ರಿಂದ 2019 ರವರೆಗೆ (8 ವರ್ಷಗಳು) ಅಂಬಾರಿ ಹೊತ್ತಿದ್ದನು . ಮೈಸೂರು ರಾಜಮನೆತನದ ಪ್ರೀತಿಯ ಆನೆಯಾಗಿದ್ದ ಅರ್ಜುನನ ಸಾವು ಇಡೀ ನಾಡಿಗೆ ನೋವುತಂದಿದೆ. ಈಗ 60 ವರ್ಷ ಮೇಲ್ಪಟ್ಟ ಆನೆಗಳನ್ನು ನಿವೃತ್ತಿಗೊಳಿಸುವ ಸರ್ಕಾರದ ಆದೇಶದ ಮೇಲೆ ಹೆಸರನ್ನು ಕೈಬಿಡಲಾಗಿತ್ತು. ಬಳಿಕ ಅಭಿಮನ್ಯು ಅರ್ಜುನನ ಉತ್ತರಾಧಿಕಾರಿಯಾಗಿ ಅಂಬಾರಿ ಹೊರುತ್ತಿದ್ದಾನೆ. ಇದೀಗ ಅರ್ಜುನನ ಸಾವು ಮೈಸೂರು ಸಂಸ್ಥಾನಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ವರದಿ ಮತ್ತು ಫೋಟೋ ಕೃಪೆ : ಮಾಲತೇಶ್ ಅರಸ್.