ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಟ 21 ಸಾವಿರ ರೂ.ಗಳ ಮಾಸಿಕ ವೇತನ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಮಂಗಳವಾರ ತಹಶೀಲ್ದಾರ್ ಮೂಲಕ ಪ್ರಧಾನಿ ನರೇಂದ್ರಮೋದಿರವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದಲೂ ಜೀವನ ಭದ್ರತೆಯಿಲ್ಲದೆ ಅಡುಗೆ ತಯಾರಿಕೆಯಲ್ಲಿ ತೊಡಗಿರುವವರಿಗೆ ಮಾಸಿಕ 2700 ರೂ. ಅಡುಗೆ ಸಹಾಯಕಿಯರಿಗೆ ಮಾಸಿಕ 2600 ರೂ.ಗಳನ್ನು ನೀಡುತ್ತಿರುವುದರಿಂದ ಜೀವನ ನಿರ್ವಹಣೆ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರ 2021-22 ರ ಬಜೆಟ್‍ನಲ್ಲಿ ಬಿಸಿಯೂಟ ತಯಾರಕರಿಗೆ ತಿಂಗಳಿಗೆ 21 ಸಾವಿರ ರೂ.ಗಳ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಹೈಕೋರ್ಟ್ ಆದೇಶಿಸಿರುವಂತೆ ಕೆಲಸ ಖಾಯಂಗೊಳಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು.
ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಬಿಸಿಯೂಟ ತಯಾರಿಕೆ ಎನ್ನುವ ಯೋಜನೆಯನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮವೆಂದು ಮಾರ್ಪಡಿಸಬೇಕು. ಬಿಸಿಯೂಟ ತಯಾರಕರನ್ನು ಗೌರವ ಕಾರ್ಯಕರ್ತರು ಎನ್ನುವುದನ್ನು ಬಿಟ್ಟು ಕಾರ್ಮಿಕರೆಂದು ಘೋಷಿಸಿ ಕಾರ್ಮಿಕ ಇಲಾಖೆ ವ್ಯಾಪ್ತಿಗೊಳಪಡಿಸಬೇಕು. ಅರವತ್ತು ವರ್ಷ ಮೀರಿ ನಿವೃತ್ತಿಯಾದವರಿಗೆ ಎರಡು ಲಕ್ಷ ರೂ.ಇಡಿಗಂಟು ನೀಡಬೇಕು. ಮಾಸಿಕ ಮೂರು ಸಾವಿರ ರೂ.ಪಿಂಚಣಿ ಕೊಡಬೇಕೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.
ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತ್ಯಕೀರ್ತಿ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಅಧ್ಯಕ್ಷೆ ಸುವರ್ಣಮ್ಮ, ತಾಲ್ಲೂಕು ಖಜಾಂಚಿ ರಜೀಯಾ, ಪರವಿಂದ್‍ತಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.