ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್ 06 : ಫಲಿತಾಂಶದ ಗುಂಗಿನಲ್ಲಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯನ್ನು ಖಂಡಿಸಿ ಸೆಪ್ಟೆಂಬರ್ 8 ರಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಬಿಜೆಪಿ.ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಳೆಯಿಲ್ಲದೆ ಬೆಳೆ ನಾಶವಾಗಿರುವುದರಿಂದ ಅನ್ನದಾತ ಕೈಚೆಲ್ಲಿ ಕೂತಿದ್ದಾನೆ. ರೈತರ ಸಮಸ್ಯೆಗಳನ್ನು ಕಡೆಗಣಿಸಿ ದೆಹಲಿ ನಾಯಕರ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಪೈಪೋಟಿಯಲ್ಲಿ ಬಿದ್ದಿದ್ದಾರೆ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ಎಚ್ಚರಿಸಿ ರೈತರ ಧ್ವನಿಯಾಗಿ ನಿಲ್ಲುವುದಕ್ಕಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ಐದು ಉಚಿತ ಗ್ಯಾರೆಂಟಿಗಳ ಭರವಸೆಗಳನ್ನು ನೀಡಿ ಗೆದ್ದಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರುಗಳಿಗೆ ರೈತರ ಗೋಳಾಟ, ಕಣ್ಣೀರು ಕಾಣುತ್ತಿಲ್ಲ. ರಾಜ್ಯದಲ್ಲಿ ಬರಗಾಲವನ್ನು ಘೋಷಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇಡಿ ರಾಜ್ಯದಲ್ಲಿ ಶೇ.99 ರಷ್ಟು ಬೆಳೆಗಳು ನಾಶವಾಗಿವೆ. ಪರಿಶೀಲಿಸಲು ಕಂದಾಯ ಸಚಿವರಿಗೂ ಕಾಳಜಿಯಲ್ಲ. ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿರುವುದಿಂದ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಲ ತೀರಿಸಲು ಆಗದೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸ್ವಲ್ಪವೂ ಕನಿಕರವಿಲ್ಲದೆ ರಾಜ್ಯದ ಸಚಿವರೊಬ್ಬರು ಪರಿಹಾರದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ಹಗುರುವಾಗಿ ಮಾತನಾಡುತ್ತಿದ್ದಾರೆ. ದಿನಕ್ಕೆ ಮೂರ್ನಾಲ್ಕು ಗಂಟೆಗಳಷ್ಟು ವಿದ್ಯುತ್ ನೀಡಲು ಆಗದ ರಾಜ್ಯ ಸರ್ಕಾರ ಲೋಡ್‍ಶೆಡ್ಡಿಂಗ್ ಮಾಡುವುದಾಗಿ ಹೇಳುತ್ತಿದೆ.
ರೈತರ ಸ್ಥಿತಿ ಹೀನಾಯವಾಗಿದೆ. ಬಾಳು ಹಾಳಾಗುವ ಮುನ್ನ ರಾಜ್ಯ ಸರ್ಕಾರವನ್ನು ಪ್ರತಿಭಟನೆಯ ಮೂಲಕ ಎಚ್ಚರಿಸಲಾಗುವುದೆಂದರು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಮಂಜೂರಾಗಿರುವ ಭದ್ರಾಮೇಲ್ದಂಡೆ ಯೋಜನೆ ಒಂದಿಚು ಕಾಮಗಾರಿ ಆಗಿಲ್ಲ. ರೈತರ ಮುಖ ಬಾಡಿದೆ. ಕಿಸಾನ್ ಸಮ್ಮಾನ್, ವಿದ್ಯಾಸಿರಿ ಯೋಜನೆಯನ್ನು ಕಾಂಗ್ರೆಸ್ ಹಿಂದಕ್ಕೆ ಪಡೆದಿದೆ. ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿಗೊಳಿಸಿ ರೈತರಿಗೆ ನಮ್ಮ ಸರ್ಕಾರ ಅನುಕೂಲ ಮಾಡಿತ್ತು. ಅದನ್ನು ವಾಪಸ್ ಪಡೆದಿದ್ದಾರೆ. ಕ್ಷೀರ ಬ್ಯಾಂಕ್, ಜಿಲ್ಲೆಗೊಂದು ಗೋಶಾಲೆ ತೆರೆಯಲಾಗಿದ್ದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿ ರೈತ ವಿರೋಧಿ, ರೈತ ಮಕ್ಕಳ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಕೃಷಿ ಸಚಿವರಿಗೆ ಸೂಚನೆ ಕೊಡುತ್ತಿಲ್ಲ.
ಅಡಿಕೆ ಡ್ರಿಪ್ ಇರಿಗೇಷನ್‍ಗೆ ಸಬ್ಸಿಡಿ ಬೇಕು. ನುಡಿದಂತೆ ನಡೆದಿದ್ದೇವೆಂದು ಹೇಳಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನದಾತನ ಬಾಳನ್ನು ಗಟ್ಟಿಗೊಳಿಸಲು ಏನು ಮಾಡಿದ್ದಾರೆಂದು ರಾಜ್ಯದ ಜನ ಕೇಳುತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ. ಇಲ್ಲದಿದ್ದರೆ ಅಹಂನಿಂದ ಕೆಳಗಿಳಿಸುತ್ತಾರೆಂದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ. ಮುರಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಚಾಲುಕ್ಯ ನವೀನ್ ಪತ್ರಿಕಾಗೋಷ್ಠಿಯಲ್ಲಿದ್ದರು.