ಚಿತ್ರದುರ್ಗ.ಡಿ.09: ಚಿತ್ರದುರ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 1366 ಗ್ರಾಮಗಳ ಪೈಕಿ 1040 ಹಳ್ಳಿಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಮಾಡಲು ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಿ, ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಜಿ.ಪಂ.ಸಿಇಓ ಎಂ.ಎಸ್.ದಿವಾಕರ ಹೇಳಿದರು.
ಈ ಕುರಿತು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಅವರು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ 2020 ರಿಂದ 2ನೇ ಹಂತದ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿದೆ.
ಈ ಹಿನ್ನಲೆಯಲ್ಲಿ ಗ್ರಾಮಗಳಲ್ಲಿ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೈರ್ಮಲ್ಯದ ದೃಷ್ಟಿಯಿಂದ ಹಲವು ಸುರಕ್ಷಿತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಶೌಚಾಲಯ ಇಲ್ಲದ ಜಾಗದಲ್ಲಿ ಶೌಚಾಲಯ ನಿರ್ಮಿಸಿಕೊಡುವುದು ಕಟ್ಟಲು ಜಾಗವಿಲ್ಲದವರಿಗೆ ಸಮುದಾಯ ಶೌಚಾಲಯವನ್ನು ನಿರ್ಮಿಸುವುದು. ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ.
ದ್ರವ ತಾಜ್ಯ ನಿರ್ವಹಣೆಗೆ ಅನುಮೋದನೆ ನೀಡಿರುವ 1040 ಗ್ರಾಮಗಳ ಪೈಕಿ315 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ದ್ರವ ತ್ಯಾಜ್ಯ ನಿರ್ವಹಣೆಯ ಭಾಗವಾದ ಮಲ ತ್ಯಾಜ್ಯ ನಿರ್ವಹಣೆ, ಕಪ್ಪುನೀರಿನ ನಿರ್ವಹಣೆ ಅಡಿಯಲ್ಲಿ ಅವಳಿಗುಂಡಿಗಳ ನಿರ್ಮಾಣ ಮಾಡಲು ಒತ್ತು ನೀಡಿಲಾಗಿದೆ. ಇದರಿಂದ ಒಂದು ಗುಂಡಿ ತುಂಬಿದ ಮೇಲೆ ವಾಲ್ ತಿರುಗಿಸಿ ಮತ್ತೊಂದು ಗುಂಡಿಗೆ ಮಲ ತ್ಯಾಜ್ಯವನ್ನು ಹರಿಸಲಾಗುತ್ತದೆ.ಕಪ್ಪು ನೀರಿನ ವೈಜ್ಞಾನಿಕವಾಗಿ ನಿರ್ವಹಣೆಗಾಗಿ ಜಿಲ್ಲೆಯ 39 ಮಲ ತ್ಯಾಜ್ಯ ಸಂಸ್ಕರಣಾ ಘಟಕ (FSTP- Faecal Sludge Treatment Plant)ಗಳನ್ನು ಅನುಷ್ಠಾನಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ಹಿರಿಯೂರು ತಾಲ್ಲೂಕಿನ ವಿ.ವಿ.ಪುರ, ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳ ಗುರುತಿಸಿ ಭೂ-ವೈಜ್ಞಾನಿಕ ಸಮೀಕ್ಷೆ (Topological and Geological survey) ಮಾಡಲಾಗಿದೆ. ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಿ ಸರ್ಕಾರದಿಂದ ತಾಂತ್ರಿಕ ಅನುಮೋದನೆ ಪಡೆಯಲಾಗಿದೆ. ವಿವಿಧ ಗ್ರಾಮಗಳಲ್ಲೂ ಭೂ ವೈಜ್ಞಾನಿಕ ಸಮೀಕ್ಷೆ ಜಾರಿಯಲ್ಲಿದೆ. ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲಾಗುವುದು.
ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡುವುದರಿಂದ ಪಿಟ್‌ನಿಂದ ಸಕ್ ಮಾಡುವಾಗ, ವಾಹನಕ್ಕೆ ತುಂಬುವಾಗ, ಸಾಗಾಣಿಕೆ ಮಾಡುವಾಗ, ಘಟಕಕ್ಕೆ ಕೊಂಡೊಯ್ದು ಮೇಲೆ ಅದನ್ನು ಸಂಸ್ಕರಿಸುವಾಗ ಹೀಗೆ ಯಾವ ಹಂತದಲ್ಲೂ ನೇರವಾಗಿ ಮನುಷ್ಯ ಅದನ್ನು ಮುಟ್ಟುವುದೇ ಇಲ್ಲ. ಇದರಿಂದ ಪೌರ ಕಾರ್ಮಿಕರು ಹಾನಿಕಾರಕವಲ್ಲದ ಸುರಕ್ಷಿತ ಪರಿಸರದಲ್ಲಿ ಕಾರ್ಯ ನಿರ್ವಹಿಸುವಂತೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.