ಬೆಂಗಳೂರು: ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವಿಡಿಯೋ ಮೂಲಕ ಬೆದರಿಕೆ ಬಂದಿದೆ. ಹಣ ನೀಡದೆ ಇದ್ದಲ್ಲಿ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.
ಈ ಸಂಬಂಧ ಈಗಾಗಲೇ ಸಚಿವ ಸೋಮಶೇಖರ್ ಪುತ್ರ ನಿಶಾಂತ್ ಆಡುಗೋಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಹಾಗೂ ನನ್ನ ತಂದೆಯನ್ನ ರಾಜಕೀಯವಾಗಿ ಮುಗಿಸಲು ಈ ಫ್ಲ್ಯಾನ್ ಮಾಡಿದ್ದಾರೆ ಎಂದು ನಿಶಾಂತ್ ಕಿಡಿಕಾರಿದ್ದಾರೆ.
ನಕಲಿ ವಿಡಿಯೋ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ತಂದೆ ಎಸ್ ಟಿ ಸೋಮಶೇಖರ್ ಅವರ ಪಿಎ ಮೊಬೈಲ್ ಗೆ ವಿಡಿಯೋ ಮತ್ತು ಫೋಟೋಗಳನ್ನ ಕಳುಹಿಸಿ, ಕೇಳಿದ್ದಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಹಣ ಕೊಡದೆ ಹೋದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಿಡುವುದಾಗಿ, ಅಷ್ಟೆ ಅಲ್ಲ ತಂದೆ, ಮಗನ ರಾಜಕೀಯ ಭವಿಷ್ಯವನ್ನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ.
ದೂರು ನೀಡಿದ ನಿಶಾಂತ್ ಬಳಿಮ ಮಾತನಾಡಿ, ನಾನು ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದೇನೆ. ರಾಜಕೀಯವಾಗಿ ಮುಗಿಸಲು ಈ ರೀತಿ ಅಶ್ಲೀಲ ವಿಡಿಯೋ ಸೃಷ್ಟಿಸಿ ಟಾರ್ಗೆಟ್ ಮಾಡುತ್ತಿದ್ದಾರೆ. ನಮಗೆ ತೊಂದರೆ ನೀಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.