ನವದೆಹಲಿ: ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10 ರಿಂದ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಇನ್ನು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗ ಮುಖ್ಯ ಆಯುಕ್ತ ಸುಶೀಲ್ ಚಂದ್ರ, ಕೋವಿಡ್ ಮಾರ್ಗಸೂಚಿಗಳನ್ನ ಗಮನದಲ್ಲಿಟ್ಟುಕೊಂಡೆ ಚುನಾವಣೆ ನಡೆಸುತ್ತೇವೆ. ಐದು ರಾಜ್ಯಗಳ 690 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಾಖಂಡ್ ನ ಚುನಾವಣೆ ನಡೆಯಲಿದೆ. ಉತ್ತರಪ್ರದೇಶದ 403 ಕ್ಷೇತ್ರ, ಪಂಜಾಬ್ 117, ಉತ್ತರಾಖಂಡ್ 70, ಮಣಿಪುರ 60, ಗೋವಾದ 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಐದು ರಾಜ್ಯಗಳಲ್ಲಿ ಈ ಬಾರಿ 24.5 ಲಕ್ಷ ಜನರು ಹೊಸದಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಈ ತಕ್ಷಣದಿಂದಲೇ ಪಂಚರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ.