ಚಿಕ್ಕಬಳ್ಳಾಪುರ: ಇತ್ತೇಚೆಗೆ ಸಾಕಷ್ಟು ಜಿಲ್ಲೆಗಳಲ್ಲಿ ಭೂಮಿಕಂಪನ ಆಗಿರುವ ಅನುಭವಗಳು ವರದಿಯಾಗಿವೆ. ವಿಜಯಪುರದಲ್ಲೂ ಎರಡ್ಮೂರು ಬಾರಿ ಭೂಮಿ ಕಂಪಿಸಿದೆ. ಇದೀಗ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಚಿಕ್ಕಬಳ್ಳಾಪುರದಲ್ಲೂ ಭೂಮಿ ಕಂಪನದ ಸುದ್ದಿ ಕೇಳಿ ಬಂದಿದೆ.
ಈ ಹಿಂದೆ ಕೂಡ ಈ ಜಿಲ್ಲೆಯಲ್ಲಿ ಭೂಮಿ ಕಂಪನ ಆಗಿದ್ದ ವರದಿಯಾಗಿತ್ತು. ಇದೀಗ ಶೆಟ್ಟಿಗೆರೆ, ಬಂಡಹಳ್ಳಿ, ಪಿಲ್ಲಗುಂಡ್ಲಳ್ಳಿ ಸೇರಿದಂತೆ ಸುತ್ತಮುತ್ತಲಿರುವ ಹಳ್ಳಿಗಳಲ್ಲಿ ಭೂಮಿ ಕಂಪಿಸಿದೆ. ಇದರ ಪರಿಣಾಮ ಕೆಲವು ಮನೆಗಳು ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ಪಾತ್ರೆ ಸಾಮಾನುಗಳು ನೆಲಕ್ಕೆ ಉರುಳಿವೆ.
ಬೆಳಗಿನ ಜಾವ 3.16 ನಿಮಿಷಕ್ಕೆ ಭೂಮಿ ಕಂಪನದ ಅನುಭವವಾಗಿದ್ದು, 3-6 ನಿಮಿಷಗಳ ಕಾಲ ಭೂಮಿಯೊಳಗಡೆ ಜೋರು ಶಬ್ಧವಾದಂತೆ ಆಗಿದೆ. ಭೂಮಿಯ ಕಂಪನಕ್ಕೆ ಹೆದರಿದ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತ್ತೊಮ್ಮೆ ಕಂಪಿಸಿದೆ. ಈ ಹಿಂದೆ ಭೂಮಿ ಕಂಪಿಸಿದ್ದಕ್ಕೆ ಅಲ್ಲಿನ ಜನರೆಲ್ಲಾ ಸಂಬಂಧಿಕರ ಮನೆಗೆ ಹೋಗಿದ್ದರು. ಬಳಿಕ ಯಾವುದೇ ಸಮಸ್ಯೆ ಕಾಣದೆ ಇದ್ದಾಗ ಮತ್ತೆ ಊರಿಗೆ ತೆರಳಿದ್ದರು. ಇದೀಗ ಭೂಮಿ ಕಂಪಿಸಿದ್ದು, ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.