ಚಿತ್ರದುರ್ಗ, (ಜ.02) : ಗುರಿ ಮುಟ್ಟುವವರೆಗೂ ಇಟ್ಟ ಹೆಜ್ಜೆಯನ್ನು ಹಿಂತೆಗೆಯುವುದಿಲ್ಲ, ಜನಾಂಗಕ್ಕೆ ಮೀಸಲಾತಿ ಸಿಗುವವರೆಗೂ ಹೋರಾಟ ನಿರಂತರವಾಗಿ ಇರುತ್ತದೆ ಎಂದು ಪಂಚಮಸಾಲಿ ಸಮಾಜದ ಶ್ರೀ ಜಯ ಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ನಾವು 2022 ಜನವರಿ 14ಕ್ಕೆ ಪಾದಾಯತ್ರೆ ಮಾಡಿ ಒಂದು ವರ್ಷವಾಗಲಿದೆ ಇದರ ಆಚರಣೆಯನ್ನು ಅಂದು ಕೂಡಲಸಂಗಮದಲ್ಲಿ ಮಾಡಲಾಗುತ್ತಿದೆ ಅಂದಿನ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ. ಅಂದು ಮತ್ತೊಮ್ಮೆ ನಮ್ಮ ಶಕ್ತಿಯನ್ನು ಪ್ರದರ್ಶನವನ್ನು ಮಾಡಬೇಕಿದೆ. ಅಂದು ರಾಜ್ಯದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸುವುದರ ಮೂಲಕ ಮುಖ್ಯಮಂತ್ರಿಗಳಿಗೆ ನಮ್ಮ ಮೀಸಲಾತಿಯ ಬಗ್ಗೆ ಮತ್ತೊಮ್ಮೆ ಮನವರಿಕೆಯನ್ನು ಮಾಡಿಕೋಡಬೇಕಿದೆ. ಹಿಂದಿನ ಮುಖ್ಯಮಂತ್ರಿಗಳಾದ ಯಡೆಯೂರಪ್ಪರವರು ನಮಗೆ ಮೀಸಲಾತಿಯನ್ನು ನೀಡುವ ಬಗ್ಗೆ ಭರವಸೆಯನ್ನು ನೀಡಿದ್ದರು ಎಂದರು.
ಅದೇ ರೀತಿ ಇಂದಿನ ಮುಖ್ಯಮಂತ್ರಿಗಳಾದ ಬೊಮ್ಮಾಯಿಯವರು ನಮ್ಮ ಹೋರಾಟಕ್ಕೆ ಆತ್ಮ ವಿಶ್ವಾಸವನ್ನು ತುಂಬುವಂತ ಕಾರ್ಯವನ್ನು ಮಾಡಿದ್ದಾರೆ. ನಮ್ಮನ್ನು ಗೃಹ ಕಚೇರಿಗೆ ಕರೆಯಿಸಿ ನಮ್ಮ ಜೊತೆ ಹಾಗೂ ಸಂಬಂಧಪಟ್ಟವರ ಜೊತೆಯಲ್ಲಿ ಮೀಸಲಾತಿಯ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ನಮಗೆ ಭರವಸೆಯನ್ನು ನೀಡಿದೆ ಎಂದು ನಮ್ಮ ಹೋರಾಟವನ್ನು ನಿಲ್ಲಿಸಿಲ್ಲ, ಅದು ನಿರಂತರವಾಗಿ ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿಯೂ ಸಹಾ ಜನಾಂಗದ ಸಂಘಟನೆಯಾಗಬೇಕಿದೆ ಇದಕ್ಕೆ ಬೇಕಾದ ರೂಪುರೇಷೆಗಳನ್ನು ತಯಾರಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ನಮ್ಮ ಹೋರಾಟ ನಿರಂತರವಾಗಿ ಇರಲಿದ್ದು ಮೀಸಲಾತಿಯನ್ನು ಪಡೆದೇ ತೀರಬೇಕಿದೆ. ಕೇಂದ್ರ ಸರ್ಕಾರವು ಮೀಸಲಾತಿಯನ್ನು ನೀಡುವ ಬಗ್ಗೆ ಆಯಾ ರಾಜ್ಯಗಳಿಗೆ ಅಧಿಕಾರವನ್ನು ನೀಡಿದೆ. ಇದರಿಂದ ನಮ್ಮ ಹೋರಾಟ ರಾಜ್ಯ ಮಟ್ಟದಲ್ಲಿ ನಡೆಯಬೇಕಿದೆ. ಇದಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಯನ್ನು ರಚನೆ ಮಾಡಲಾಗುವುದು. ಇದರಿಂದ ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ. ಮೀಸಲಾತಿ ಸಿಕ್ಕರೆ ನನಗೆ ಒಬ್ಬನಿಗೆ ಸಿಗುವುದಿಲ್ಲ, ಸಮಾಜದ ಎಲ್ಲರಿಗೂ ಸಹಾ ಸಿಗುತ್ತದೆ ಇದರಿಂದ ಹೋರಾಟಕ್ಕೆ ಪ್ರತಿಯೂಬ್ಬರು ಸಹಾ ಒಂದಾಗಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.
ನಮ್ಮ ಹೋರಾಟವನ್ನು ನೋಡಿ ಬೇರೆ ಸಮಾಜದವರು ಸಹಾ ಹೋರಾಟವನ್ನು ಪ್ರಾರಂಭ ಮಾಡಿದ್ದಾರೆ ಮಾಡಲಿ ನಮಗೆ ಏನು ತೊಂದರೆ ಇಲ್ಲ ನಮ್ಮ ಮೀಸಲಾತಿ ನಮಗೆ ಸಿಕ್ಕರೆ ಸಾಕು ನಾವು ಬೇರೆಯವರ ಮೀಸಲಾತಿಗೆ ಕೈ ಹಾಕುವುದಿಲ್ಲ, ಈ ಹಿಂದೆ ನೀವು ಯಾವ ಜನಾಂಗದವರು ಎಂದರೆ ಹೇಳಲು ಹಿಂಜರಿಯುತ್ತಿದ್ದ ನಮ್ಮ ಜನಾಂಗದವರು ಈಗ ಧೈರ್ಯವಾಗಿ ಪಂಚಮಸಾಲಿ ಎನ್ನುತ್ತಿದ್ದಾರೆ. ಇದು ನಮ್ಮ ಹೋರಾಟದ ಫಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗಂಗಾಧರ್ ರವರನ್ನು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ಸೇರಿದಂತೆ ಇತರರು ಭಾಗವಹಿಸಿದ್ದರು.