ಹುಬ್ಬಳ್ಳಿ: ಎಲ್ಲಾ ಪಕ್ಷದಲ್ಲೂ ಆಂತರಿಕ ಮುನಿಸು ಅನ್ನೋದು ಇದ್ದೇ ಇರುತ್ತೆ. ಅದು ಆಗಾಗ ಬಹಿರಂಗ ವಾಗುತ್ತಿರುತ್ತೆ. ಇದೀಗ ಬಿಜೆಪಿಯಲ್ಲಿ ಅಂತ ಮುನಿಸೊಂದು ಎಲ್ಲರ ಮುಂದೆ ಅನಾವರಣವಾಗಿದೆ. ಅದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ನಡುವೆ.
ಹುಬ್ಬಳ್ಳಿಯಲ್ಲಿ ನಡೆದ ಎರಡು ದಿನಗಳ ಕಾರ್ಯಕಾರಿಣಿ ಸಭೆ ಅಂತ್ಯವಾಗಿದೆ. ಈ ಸಭೆಯಲ್ಲಿ ಪಜ್ಷ ಸಂಘಟನೆ, ಮುಂದಿನ ಚುನಾವಣೆಯ ರೂಪು ರೇಷೆಗಳನ್ನು ಚರ್ಚಿಸಲಾಗಿದೆ. ಇದೇ ವೇಳೆ ಶಾಸಕ ಅರವಿಂದ್ ಬೆಲ್ಲದ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇದು ಕೊಂಚ ಎಲ್ಲರಿಗೂ ಶಾಕಿಂಗ್ ವಿಚಾರ ಅನಿಸಿದೆ. ಇನ್ನು ಕೋರ್ ಕಮಿಟಿ ಸಭೆ ನಡೆಯದೆಯೇ ಕಾರ್ಯಕಾರಿಣಿ ಸಭೆಯೂ ಅಂತ್ಯವಾಗಿದೆ. ಇನ್ನು ರಾಜೀನಾಮೆ ನೀಡಿದ ಬೆಲ್ಲದ್ ಎರಡನೇ ದಿನ ಗೈರಾಗಿ ತಮ್ಮ ಅತೃಪ್ತಿ ಹೊರ ಹಾಕಿದ್ದರು.
ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಒಂದೇ ವೇದಿಕೆಯಲ್ಲಿದ್ರು ಕೂಡ ಒಬ್ಬರಿಗೊಬ್ಬರು ಮುಖ ಕೂಡ ನೋಡಿಕೊಂಡಿರಲಿಲ್ಲ. ಕಾರ್ಯಕಾರಿಣಿ ಸಭೆಗೆ ಸಿಎಂ ಬೊಮ್ಮಾಯಿ ಆಗಮಿಸುತ್ತಿದ್ದಂತೆಯೇ ಎಲ್ಲರ ಚಿತ್ತ ಅವರತ್ತ ಹರಿಯಿತು. ಆದ್ರೆ ಎದುರಿಗೇ ಇದ್ರೂ ಜಗದೀಶ್ ಶೆಟ್ಟರ್ ತಿರುಗಿ ನೋಡಲಿಲ್ಲ. ಎಲ್ಲಾ ಸಚಿವರು ಸಿಎಂಗೆ ನಮಸ್ಕಾರ ಮಾಡಿದ ಸಂದರ್ಭದಲ್ಲಿ ಮಾಜಿ ಸಿಎಂ ಶೆಟ್ಟರ್ ಮೌನ ವಹಿಸಿದ್ದುದು, ಹಲವಾರು ಅರ್ಥಗಳಿಗೆ ಎಡೆಮಾಡಿಕೊಟ್ಟಿತು.