ಮಂಡ್ಯ: ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತಂದಿರುವುದು ಕಾಂಗ್ರೆಸ್ ಪಕ್ಷ ಸಾಕಷ್ಟು ವಿರೋಧ ವ್ಯಕ್ತಪಡಿಸಿದೆ. ಕಾಯ್ದೆ ಬಗ್ಗೆ ಮಾತನಾಡಿದಾಗಿನಿಂದ ವಿರೋಧಿಸುತ್ತಲೆ ಬರುತ್ತಿದ್ದಾರೆ. ಇದೀಗ ಈ ಬಗ್ಗೆ ಮಾತನಾಡಿರುವ ಮಾಜಿ ಡಿಸಿಎಂ ಪರಮೇಶ್ವರ್, ಕಾಯ್ದೆ ತರದೆ ಇದ್ದಿದ್ದರೆ ಜನ ಸಾಯ್ತಾ ಇದ್ದರಾ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಶಿವಪುರದಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ್, ನಾಡಿನ ಜ್ವಲಂತ ಸಮಸ್ಯೆಗಳನ್ನ ಚರ್ಚಿಸೋದು ಬಿಟ್ಟು ಈ ಕಾಯ್ದೆ ತರುವಂತ ಅವಸರವೇನಿತ್ತು..? ಕಾಯ್ದೆ ತರದೆ ಹೋಗಿದ್ದರೆ ಕರ್ನಾಟಕ ಮುಳುಗುತ್ತಿತ್ತಾ..? ಅಥವಾ ಜನ ಸಾಯ್ತಾ ಇದ್ರಾ ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ.
ಎಲ್ಲಾ ಧರ್ಮದವರನ್ನು ಒಂದು ಮಾಡುವ ಬದಲು, ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡ್ತಿದ್ದಾರೆ. ಎಲೆಕ್ಷನ್ ಹತ್ತಿರ ಬರ್ತಾ ಇದೆಯಲ್ಲ ಹೀಗಾಗಿ ಹಿಙದುಗಳನ್ನೆಲ್ಲಾ ಒಟ್ಟುಗೂಡಿಸಿ, ಮುಸ್ಲಿಂ ರನ್ನು ದೂರ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮನೆಗಳು ಬಿದ್ದು ಹೋಗಿವೆ. ಬೆಳೆ ನಾಶವಾಗಿದೆ. ಆ ಸಮಸ್ಯೆ ಬಗ್ಗೆ ಮಾತನಾಡುವ ಬದಲು ಕಾಯ್ದೆ ಜಾರಿ ತಂದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.