Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶರಣತತ್ತ್ವಯುಕ್ತ ಮುರುಘಾ ಪರಂಪರೆಯು ಒಂದು ವಿಶಾಲವಾದ ಛತ್ರಿ : ಡಾ. ಶಿವಮೂರ್ತಿ ಮುರುಘಾ ಶರಣರು

Facebook
Twitter
Telegram
WhatsApp

 

ಚಿತ್ರದುರ್ಗ, (ಡಿ.06):  ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ಡಾ. ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಮುರುಘಾ ಪರಂಪರೆಯ ಮಠಾಧೀಶರ ಸಮಾಗಮ, ಮಠಗಳ ನಿರ್ವಹಣೆ ಹಾಗೂ ಬಸವಕೇಂದ್ರಗಳ ಸ್ಥಾಪನೆ ಕುರಿತ ಸಮಾರಂಭ ನಡೆಯಿತು.

ಸಮಾವೇಶವನ್ನುದ್ದೇಶಿಸಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನಾ(ನೀ)ವೆಲ್ಲ ಬರಿಗೈಲಿ ಬಂದವರು. ಮುರುಘಾ ಪರಂಪರೆಯು ನಮ್ಮ ನಿಮ್ಮ ಬದುಕನ್ನು ಕಟ್ಟಿಕೊಟ್ಟಿದೆ. ಪರಂಪರೆಯ ಮುಂದುವರಿಕೆಯೇ ನಾವು ಅದಕ್ಕೆ ಸಲ್ಲಿಸುವ ಗೌರವ. ಶರಣತತ್ತ್ವಯುಕ್ತ ಮುರುಘಾ ಪರಂಪರೆಯು ಒಂದು ವಿಶಾಲವಾದ ಛತ್ರಿ. ಮರದ ನೆರಳಲ್ಲಿದ್ದು, ತನ್ನ ನೆರಳನರಸುವರೆ? ಎನ್ನುವ ಬಸವವಾಣಿಯಂತೆ ನಡೆದುಕೊಳ್ಳಬೇಕಿದೆ. ಮುರುಘಾ ಪರಂಪರೆಗೆ ಸೇರಿದ ಮಠಗಳಿಗೆ ಕೆಲವರು ಸ್ವಾಮಿಗಳಾಗಿದ್ದು, ತಮ್ಮದು ಸ್ವತಂತ್ರ ಮಠವೆಂದು ಭಾವಿಸುತ್ತಾರೆ.

ಸಂಪರ್ಕದ ಕೊರತೆಯಿಂದಲೊ ಅಥವಾ ಅವಜ್ಞೆಯಿಂದಲೊ ಕೆಲವರು ಮುರುಘಾ ಪರಂಪರೆಯನ್ನು ಅಲಕ್ಷಿಸುತ್ತಾರೆ. ಕೆಲವರಿಗೆ ಮುರುಘಾ ಸಂಪ್ರದಾಯದ ಶಾಖಾಮಠ ಬೇಕು; ಮುರುಘಾ ಪರಂಪರೆ ಬೇಡ. ಇಂಥವರು ಆಸ್ತಿಕೇಂದ್ರಿತ ಮಠಾಧೀಶರೆನಿಸಿಕೊಳ್ಳುತ್ತಾರೆ; ಆದರ್ಶಕೇಂದ್ರಿತ ಮಠಾಧೀಶರೆನಿಸಿಕೊಳ್ಳುವುದು ಮುಖ್ಯ. ಮುರುಘಾ ಪರಂಪರೆಗೆ ಸೇರಿದ ಶಾಖಾಮಠಗಳಿಗೆ ಕೆಲವರು ಮೂಲಮಠದ ಪರವಾನಿಗೆ ಇಲ್ಲದೆ ನೇಮಕಗೊಂಡಿದ್ದಾರೆ.

ಆಯಾಯ ಊರಿನ ಜನರಿಗೆ (ಭಕ್ತರಿಗೆ) ಪರಂಪರೆಯ ಅರಿವು ಇಲ್ಲದಿರಬಹುದು; ಅಥವಾ ಉತ್ತರಾಧಿಕಾರಿಯನ್ನು ನಿಯೋಜಿಸುವಾಗ ಮೂಲಮಠದ ಪರವಾನಿಗೆ ಪಡೆಯದಿರಬಹುದು. ಕೆಲವರು ಇದರ ಲಾಭವನ್ನು ಪಡೆದಂತೆ ಕಾಣಿಸುತ್ತದೆ. ಮುರುಘಾ ಪರಂಪರೆಯ ಶಾಖಾಮಠಗಳ ಅಳಿವಿಗೆ ಇದು ಒಂದು ಕಾರಣವಾಗಿದೆ.

ಈ ಪರಂಪರೆಗೆ ಸೇರಿದ ಯಾವ ಮಠಗಳಿಗಾದರು ಸ್ವಾಮಿಗಳಾಗಲಿ, ತೊಂದರೆಯಿಲ್ಲ. ಮೂಲಮಠದೊಂದಿಗೆ ಒಂದಿಷ್ಟು ಸಂಪರ್ಕ, ಸೈದ್ಧಾಂತಿಕ ಸ್ಪಷ್ಟತೆ ಇರಲಿ. ಸ್ವಾಮಿಗಳಾಗುವುದು ದೊಡ್ಡ ಸಾಧನೆ ಅಲ್ಲ: ಸ್ವಾಮಿಗಳಾಗಿ ಯಾವ ಸಾಧನೆ ಮಾಡಲಾಯಿತು? ಎಂಬುದು ಮುಖ್ಯ. ಇಲ್ಲದಿದ್ದರೆ ಅಂಥವರನ್ನು ಕಾಲ ಕ್ಷಮಿಸುವುದಿಲ್ಲ.

ಮುಪ್ಪಾವಸ್ಥೆಯಲ್ಲಿ ತಮ್ಮ ರಕ್ತಸಂಬಂಧಿಗಳನ್ನು ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸುವುದು. ಇದು ಎರಡನೆಯ ಕಾರಣ. ಸಂಬಂಧಿಕರು ಸೇರುತ್ತ ಹೋದಂತೆ ಅದು ಮುಂದೆ ಒಂದು ಕುಟುಂಬದ ಆಸ್ತಿ ಆಗಿಬಿಡುತ್ತದೆ.

ತಾವು ಗಟ್ಟಿಯಿರುವಾಗಲೆ ಓರ್ವ ಯುವಕನನ್ನು (ಧಾರ್ಮಿಕ ಆಸಕ್ತಿಯಿರುವ) ಆಯ್ಕೆ ಮಾಡಿ ಬಸವತತ್ತ್ವ ಅಥವಾ ಶರಣತತ್ತ್ವವನ್ನು ಅಧ್ಯಯನ ಮಾಡಿಸುವುದು, ಜತೆಗೆ 2-3 ಭಾಷೆಗಳಲ್ಲಿ ಪರಿಣಿತನನ್ನಾಗಿಸುವುದು ಎಲ್ಲ ಮಠಾಧೀಶರ ಆದ್ಯ ಕರ್ತವ್ಯ. ರಕ್ತಸಂಬಂಧಗಳ ಪೈಕಿ ಉತ್ತರಾಧಿಕಾರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದರೆ ತೊಂದರೆಯಿಲ್ಲ; ರಕ್ತಸಂಬಂಧವೇ ಅರ್ಹತೆ ಆಗದೆ, ಆತನಲ್ಲಿನ ಪ್ರತಿಭೆ- ಧಾರ್ಮಿಕ – ಸಾಮಾಜಿಕ ಕಳಕಳಿ – ಸೇವಾಮನೋಭಾವನೆ  ಇತ್ಯಾದಿ ಮಾನದಂಡವಾಗಬೇಕು.

ಅಂಥವರನ್ನು ಬಸವತತ್ತ್ವ ಪ್ರಣೀತ ಶೂನ್ಯಪೀಠಕ್ಕೆ (ಚಿತ್ರದುರ್ಗ) ಕಳುಹಿಸಿ ಸೂಕ್ತ ಶಿಕ್ಷಣ, ತರಬೇತಿ ಮತ್ತು ಮಾರ್ಗದರ್ಶನ ನೀಡು(ಡಿಸು)ತ್ತ ಯೋಗ್ಯ ಸ್ವಾಮಿಗಳನ್ನಾಗಿ ರೂಪಿಸಬೇಕಾಗುತ್ತದೆ. ಕೆಲ ಮಠಾಧೀಶರ ಇಂಥ ನಿರ್ಧಾರಗಳಿಗೆ ಶ್ರೀಮಠ ಬೆಂಬಲಿಸಿದೆ. ಶಾಖಾಮಠ ಮತ್ತು ಮೂಲಮಠದ ನಡುವೆ ಒಪ್ಪಂದವಾಗಿದ್ದು, ತಮ್ಮ ಮರಿಗಳನ್ನು ಶ್ರೀಮಠಕ್ಕೆ ಅಧ್ಯಯನ ಮಾಡಲು ಕಳಿಸಿಕೊಟ್ಟಿರುತ್ತಾರೆ. ಇಂಥ ಉದಾಹರಣೆಗಳು ಹೆಚ್ಚಾಗಬೇಕು.

ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗುತ್ತದೆ- ಮಠವು ಹೊಂದಿರಬಹುದಾದ ಭೌತಿಕ ಆಸ್ತಿ ಅಥವಾ ಸಂಪತ್ತಿಗಿಂತ ಪರಂಪರೆಯು ಶ್ರೀಮಂತವಾದುದು. ಆಸ್ತಿ, ಹಣ ಹೋಗುತ್ತದೆ ಬರುತ್ತದೆ; ಸಾಂಸ್ಕøತಿಕ ಶ್ರೀಮಂತಿಕೆಯು ಶಾಶ್ವತ. ಈಗಾಗಲೇ ಮೂಲಮಠದ ಅನುಮೋದನೆ ಪಡೆಯದೆ ಮುರುಘಾಮಠಕ್ಕೆ ಸಂಬಂಧಿಸಿದ (ರಾಜ್ಯಾದ್ಯಂತ ಇರುವ) ಶಾಖಾಮಠಗಳಿಗೆ ಸ್ವಾಮಿಗಳಾಗಿರುವಂಥವರಿಗೆ ತಿಳಿಸುವುದೇನೆಂದರೆ, ನೀವು ಆ ಮಠಕ್ಕೆ ಸ್ವಾಮಿಗಳಾಗಿರುವುದು ಸ್ವಾಗತಾರ್ಹ.

ನಿಮ್ಮ ಮುಂದುವರಿಕೆಗೆ ಯಾವ ಅಡ್ಡಿಯಿಲ್ಲ. ನಾವು ನಿಮ್ಮ ಆಸ್ತಿಯನ್ನಾಗಲಿ ಅಥವಾ ಹಣವನ್ನಾಗಲಿ ಕೇಳುವುದಿಲ್ಲ. ತಾವು ಮುರುಘಾ ಪರಂಪರೆಯೊಂದಿಗೆ ಗುರುತಿಸಿಕೊಳ್ಳುವುದು ಅತಿಮುಖ್ಯ. ನಮಗೆ ನೀವು ಮುಖ್ಯ. ನಿಮ್ಮ ಮಠದ ಯೋಜನೆಗೆ ಮೂಲಮಠದ ಸಹಕಾರ ಇರುತ್ತದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ. ಅನ್ಯಥಾ ಭಾವಿಸದಿರಿ. ತಾವುಗಳು ಮುರುಘಾ ಪರಂಪರೆಯೊಂದಿಗೆ ಸಾಗಿದರೆ ಸಾಕು ಎಂದರು.

ಇದೇ ಸಂದರ್ಭದಲ್ಲಿ ನಾಡಿನ ವಿರಕ್ತಮಠಗಳ ಪೂಜ್ಯರುಗಳನ್ನೊಳಗೊಂಡ ಮುರುಘಾ ಪರಂಪರೆಯ ಮಠಾಧೀಶರ ಒಕ್ಕೂಟವನ್ನು  ಪ್ರಾರಂಭಿಸಲಾಯಿತು.
ಕೊಳದಮಠದ ಡಾ. ಶ್ರೀ ಶಾಂತವೀರ ಸ್ವಾಮಿಗಳು ಮಾತನಾಡಿ, ನಮ್ಮ ಮಠಗಳಿಗೆ ತಂದೆ-ತಾಯಿ, ಮೂಲಮಠ ಎಂದರೆ ಚಿತ್ರದುರ್ಗದ ಮುರುಘಾಮಠ. ಶಾಖಾಮಠಗಳ ಯೋಗಕ್ಷೇಮವನ್ನು ಮೂಲಮಠ ಗಮನಿಸಬೇಕು.  ಉತ್ತರಾಧಿಕಾರಿ ಆಯ್ಕೆಯಲ್ಲಿ ಸಂಸ್ಕಾರ ಬುದ್ಧಿ ಬರಬೇಕು. ಅವರನ್ನು ಮುರುಘಾ ಪರಂಪರೆಗೆ ಕೊಂಡೊಯ್ಯಬೇಕು. ನಮ್ಮ ಪರಂಪರೆ ಉಳಿಸಬೇಕು. ಬೆಂಗಳೂರಿನಲ್ಲಿರುವ ಎಲ್ಲವೂ ವಿರಕ್ತಮಠಗಳು. ಇಲ್ಲವಾದರೆ ಕಾನೂನಾತ್ಮಕವಾಗಿ ಸಾಗಬೇಕೆಂದರು.

ಸಂಶೋಧಕ ಡಾ. ಬಿ. ರಾಜಶೇಖರಪ್ಪ ಮಾತನಾಡಿ, ಇಂಥದ್ದೊಂದು ಸಮಾವೇಶ ಆಗಬೇಕಿತ್ತು. ಇದು ಪ್ರಶಂಸನೀಯ. ಮುರುಘಾ ಪರಂಪರೆಗೆ ವಿಶೇಷ ಇತಿಹಾಸವಿದೆ. ಮುರುಗಿ ಶಾಂತವೀರ ಶ್ರೀಗಳಿಂದ ಈ ಪೀಠ ಆಯಿತು. ಶಾಸನದ ದಾಖಲೆ ಪ್ರಕಾರ (ತಾಮ್ರಶಾಸನ) ಆನಂದಪುರದ ಮ್ಯೂಸಿಯಂನಲ್ಲಿ ಇದೆ. ಬೆಕ್ಕಿನಕಲ್ಮಠಕ್ಕೆ, ನಮ್ಮ ಶಾಖಾಮಠದ ಸ್ವಾಮಿಗಳಿಗೆ ಕೆಳದಿ ರಾಜರು ತಮ್ಮ ಭಕ್ತಿ ತೋರಿಸುತ್ತಿದ್ದರು. ಕೆಳದಿ ಅರಸರು, ಕೊಡಗಿನ ಅರಸರು ಅನೇಕ ಮಠಗಳನ್ನು ನಿರ್ಮಾಣ ಮಾಡಿದರು. ಮೂಲ ಜಗದ್ಗುರುಗಳಿಗೆ ತೋರುವ ಭಕ್ತಿಯನ್ನು ಶಾಖಾಮಠಗಳಿಗೂ ಸಲ್ಲಿಸುತ್ತಿದ್ದರು.

ತಮಿಳುನಾಡು ಮತ್ತು ಕೇರಳದಲ್ಲಿ 9 ಶಾಖಾಮಠಗಳಿವೆ. ಕಾಸರಗೋಡಿನ ವೇಕಲದಲ್ಲಿ ನಮ್ಮ ಶಾಖಾಮಠವಿದೆ. ಜಾತ್ಯತೀತವಾಗಿ ಎಲ್ಲರನ್ನು ತೆಕ್ಕೆಗೆ ತೆಗೆದುಕೊಳ್ಳುವುದು, ಪ್ರಸಾದ ನಿಲಯಗಳನ್ನು ಪ್ರಾರಂಭಿಸಿದ್ದು, ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿದ್ದು ಮುರುಘಾ ಪರಂಪರೆ. ಅದೊಂದು ಜ್ಞಾನ ಪರಂಪರೆ. ನಾವು ನಿಶ್ಚಿತವಾದ ಸಿದ್ಧಾಂತದಡಿಯಲ್ಲಿ ಸಾಗಿದರೆ ಒಳ್ಳೆಯದು. ನಮ್ಮಲ್ಲಿ ಲಕ್ಷಾಂತರ ಸಂಖ್ಯೆಯ ಪತ್ರಗಳಿವೆ. 850 ಪೈಲುಗಳಿದ್ದು, 150 ನೋಡಿದ್ದೇನೆ. ಮುರುಘಾ ಪರಂಪರೆಗೆ ಸೇರಿದ್ದೇವೆಂದು ಹೇಳುವುದು ಎಲ್ಲ ಶಾಖಾಮಠಗಳ ಹೆಮ್ಮೆ ಎಂದರು.

ಹೊಳೆ ಇಟಗಿಯ ಶ್ರೀ ಮಡಿವಾಳೇಶ್ವರ ಸ್ವಾಮಿಗಳು ಮಾತನಾಡಿ, ಮುರುಘಾ ಪರಂಪರೆಯಲ್ಲಿ ನಾವು ಇದ್ದೇವೆ ಎನ್ನುವುದು ನಮ್ಮ ಪುಣ್ಯ. ಲಕ್ಷ್ಮೇಶ್ವರದಲ್ಲಿ ಬಹಳ ಮಠಗಳಿವೆ. ಅಲ್ಲಿ ಬರೀ ಹೆಸರು ಅಷ್ಟೆ. ಹೊರರಾಜ್ಯದಲ್ಲಿಯೂ ಅನೇಕ ಮಠಗಳಿವೆ. ಅವುಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕಿದೆ. ಇದು ಯಾವಾಗಲೋ ಆಗಬೇಕಿತ್ತು. ನಮಗೆ ಶ್ರೀಮಠ ಅನೇಕ ಅನುಕೂಲ ಮಾಡಿಕೊಟ್ಟಿದೆ. ಮಠದ ಆಸ್ತಿಗಿಂತಲೂ ಪರಂಪರೆ ಮುಖ್ಯ ಎಂದರು.

ಬನವಾಸಿಯ ಶ್ರೀ ನಾಗಭೂಷಣ ಸ್ವಾಮಿಗಳು ಮಾತನಾಡಿ, ನಮಗೆ ಪರಂಪರೆ ಇಲ್ಲ ಎಂದರೆ ನಮಗೆ ಭವಿಷ್ಯವಿಲ್ಲ. ನಮ್ಮ ಬಳುವಳಿ ಇಲ್ಲದೇ ಹೋದರೆ ನಮ್ಮ ಆಸ್ತಿ ಉಳಿಯುವುದಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ನಮ್ಮ ಪರಂಪರೆ ಸಾಗಿ ಬಂದಿದೆ. ನಮ್ಮದು ಮುರುಘಾ ಪರಂಪರೆ ಒಪ್ಪಬೇಕಿದೆ. ನಾವು ಇನ್ನು ಮುಂದಾದರೂ ಸ್ವಾಮಿಗಳಾಗಿ ಬದುಕೋಣ. ನಾವು ಹೊರಗೆ ಹೋಗಿ ಅಪಹಾಸ್ಯ ಮಾಡಬಾರದು. ನಾವು ಗಂಭೀರವಾಗಿ ಚರ್ಚಿಸಬೇಕಿದೆ. ಸರಿದಾರಿಗೆ ಬಾರದಿದ್ದರೆ ಸಮಾಜವೇ ನಮ್ಮನ್ನು ಹೊಡೆದು ಹೋಗಿಸುತ್ತದೆ.  ಪ್ರಭುದೇವರು ಈ ಪೀಠದ ಪ್ರಥಮ ಜಗದ್ಗುರು. ಸಮಾಜ ಹಾಳು ಮಾಡುವುದು ಬೇಡ. ಪರಂಪರೆ ಜತೆ ನಡೆದುಕೊಂಡು ಹೋಗಬೇಕು. ನಾನು ಮುರುಘಾ ಪರಂಪರೆ ಜತೆ ಸಾಗುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ಮರಿಗಳನ್ನು ಇಲ್ಲಿಂದಲೇ ಮಾಡೋಣ ಎಂದು ಅಭಿಪ್ರಾಯಿಸಿದರು.

ಗುರುಮಠಕಲ್ ಮುರುಘಾಮಠದ ಶ್ರೀ ಶಾಂತವೀರಗುರು ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಮುರುಘಾ ಪರಂಪರೆ ಉಳಿಯಬೇಕೆಂದರೆ ಪರಂಪರೆಯ ಒಕ್ಕೂಟ ಆಗಬೇಕು. ಎಲ್ಲ ಸಭೆಗಳು ಈ ಮಠದಲ್ಲಿ ನಡೆಯಬೇಕೆಂದರು.

ಬಳ್ಳಾರಿ ಕಲ್ಯಾಣಮಠದ ಶ್ರೀ ಕಲ್ಯಾಣ ಸ್ವಾಮಿಗಳು ಮಾತನಾಡಿ, ಇದೊಂದು ಸೌಹಾರ್ದ ಚರ್ಚೆ. ದುಷ್ಟರು ಕಾವಿ ಹಾಕಲು ಸಾಧ್ಯವಿಲ್ಲ. ಅದು ಕಳಂಕ. ಹೊರಗೆ ಮಾತನಾಡುವವರು ಹೇಡಿಗಳು. ಏನಾದರು ಇದ್ದರೆ ಇಂಥ ಸಂದರ್ಭದಲ್ಲಿ ಮಾತನಾಡಬೇಕು. ಇತಿಹಾಸ ಹೇಳಲು ಧೈರ್ಯ ಬೇಕು. ನಮಗೆ ಮುರುಘಾ ಶರಣರಂತಹ ಮಠಾಧೀಶರ ಅವಶ್ಯಕತೆ ಇದೆ. ಇಲ್ಲಿನ ನಿರ್ಣಯವನ್ನು ಸ್ವಾಗತಿಸುತ್ತೇವೆ. ಇಂದಿನಿಂದಾದರೂ ನಾವು ಮುರುಘಾ ಪರಂಪರೆ ಉಳಿಸುವ ಸಂದರ್ಭ ಬಂದಿದೆ ಉಳಿಸೋಣ. ಮುರುಘಾ ಶರಣರದು ತಾಯಿ ಹೃದಯಿ. ಕಲ್ಯಾಣ ಮಠ ಈ ಪರಂಪರೆಗೆ ಸೇರಲಿ. ನಮ್ಮ ಸಂಪೂರ್ಣ ಸಹಕಾರವಿದೆ ಎಂದು ವ್ಯಕ್ತಪಡಿಸಿದರು.

ಶರಣಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಇಲ್ಲಿಗೆ ಬರುವಾಗ ಬೇಸರದಿಂದ ಇದ್ದೆ. ಆದರೆ ಶ್ರೀಗಳ ಸಂದೇಶ ನೋಡಿ ನಿರಾಳವಾಯಿತು. 17ನೇ ಶತಮಾನದಿಂದ ಇಲ್ಲಿಯವರೆಗೆ ಮುರುಘಾ ಸಮಯ. ಬಸವಣ್ಣನವರಿಂದ ಜಾತಿ ದೃವೀಕರಣವಾಯಿತು. ಬಸವ ಸಮಯ ಎತ್ತಿಹಿಡಿದ ಏಕೈಕ ಮಠ ಚಿತ್ರದುರ್ಗ ಮುರುಘಾಮಠ. ನಾವು ಒಬ್ಬೊಬ್ಬರನ್ನು ಸೇರಬೇಕು. ಇದು ಸಕಲ ಮಾನವಕುಲದ ಸಮಯ ಎಂದರು.
ಶಿಗ್ಗಾವಿಯ ಶ್ರೀ ಸಂಗನಬಸವ ಸ್ವಾಮಿಗಳು ಮಾತನಾಡಿ, ನಮ್ಮಲ್ಲಿ ಪರಂಪರೆಯ ಅರಿವು ಮೂಡಬೇಕೆಂದರು.

ಕಲಬುರ್ಗಿಯ ಶ್ರೀ ಬಸವ ಕಬೀರ ಸ್ವಾಮಿಗಳು ಮಾತನಾಡಿ, ಇಂತಹ ಸಂದರ್ಭಗಳು ನಿರಂತರವಾಗಿ ನಡೆಯಬೇಕು. ನಮ್ಮಂಳವರನ್ನು ಹುರಿದುಂಬಿಸಿ ಜೊತೆಯಲ್ಲಿ ಕೊಂಡೊಯ್ಯುವ ಕೆಲಸ ಆಗಬೇಕೆಂದರು.
ಬಂಥನಾಳ ಶ್ರೀ ವೃಷಭಲಿಂಗೇಶ್ವರ ಸ್ವಾಮಿಗಳು, ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ಮೈಸೂರು ಹೊಸಮಠದ ಶ್ರೀ ಚಿದಾನಂದ ಸವಾಮಿಗಳು, ಖಜೂರಿಯ ಶ್ರೀ ಮುರುಘೇಂದ್ರ ಕೋರಣೇಶ್ವರ ಸ್ವಾಮಿಗಳು, ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸಾವಮಿಗಳು, ಶಿರಾಳಕೊಪ್ಪದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಹಿರೇಮಾಗಡಿಯ ಶ್ರೀ ಶಿವಮೂರ್ತಿ ಸ್ವಾಮಿಗಳು, ಸದಾಶಿವಪೇಟೆಯ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ಸೇರಿದಂತೆ ನೂರಾರು ಸ್ವಾಮಿಗಳು ಸಮಾವೇಶದಲ್ಲಿದ್ದರು.

ಸಿಂಧನೂರು ಬಸವಕೇಂದ್ರದ ವೀರಭದ್ರಪ್ಪ ಕುರಕುಂದಿ, ಜಮಖಂಡಿ ಬಸವಕೇಂದ್ರದ ರವಿಎಡಹಳ್ಳಿ, ಧಾರವಾಡ ಬಸವಕೇಂದ್ರದ ಸಿದ್ಧರಾಮಣ್ಣ ನಡಕಟ್ಟಿ ಮಾತನಾಡಿದರು.
ಸವಣೂರು ದೊಡ್ಡಹುಣಸೇಮಠದ ಶ್ರೀ ಚೆನ್ನಬಸವ ಸ್ವಾಮಿಗಳು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!