ಸುದ್ದಿಒನ್, ಚಿತ್ರದುರ್ಗ, : ಕೋಟೆ ನಾಡು ಚಿತ್ರದುರ್ಗದಲ್ಲಿ ರಾತ್ರಿಯೆಲ್ಲಾ ಕಿಚ್ಚನ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕಿಚ್ಚನ ಸಿನಿಮಾ ಮ್ಯಾಕ್ಸ್ ರಿಲೀಸ್ ಗೆ ರೆಡಿಯಾಗಿದೆ. ಇನ್ನೆರಡು ದಿನ ಬಾಕಿ ಇದೆ. ಇದರ ಭಾಗವಾಗಿ ಪ್ರಚಾರದಲ್ಲಿ ಮುಳುಗಿರುವ ಕಿಚ್ಚ ಸುದೀಪ್, ಜಿಲ್ಲೆ ಜಿಲ್ಲೆಗೂ ಹೋಗಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಚಿತ್ರದುರ್ಗದಲ್ಲಿ ಸಿನಿಮಾ ಪ್ರೇಮಿಗಳ ಸಂಖ್ಯೆ ಜೋರಾಗಿಯೇ ಇದೆ. ಹೀಗಾಗಿ ಸ್ಟಾರ್ ಗಳು ಪ್ರಚಾರದ ಭಾಗವಾಗಿ ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ನಿನ್ನೆ (ಭಾನುವಾರ) ಸಂಜೆಯೇ ಸುದೀಪ್ ಕೋಟೆನಾಡಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದರು. ನಗರದ ಸೈನ್ಸ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಮೇಲೆ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿತ್ತು. ಫುಲ್ ವೈಲ್ಡ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್ ಕಂಡು ಫ್ಯಾನ್ಸ್ ಶಿಳ್ಳೆ, ಚಪ್ಪಾಳೆ ಹೊಡೆದರು. ಹಾಗೇ ಕಿಚ್ಚ ವೇದಿಕೆ ಮೇಲೆ ಏರುತ್ತಿದ್ದಂತೆ ಮೊಬೈಲ್ ಟಾರ್ಚ್ ಹಾಕುವ ಮೂಲಕ ಭವ್ಯ ಸ್ವಾಗತ ಕೋರಿದರು. ಕಿಚ್ಚನ ಡೈಲಾಗ್ ಗಂತು ಓಓ ಎಂದು ಚೀರಿದರು.
ಬಳಿಕ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಸುದೀಪ್, ಕನ್ನಡ ಸಿನಿಮಾರಂಗ ಉಳಿಯಬೇಕು ಅಂದ್ರೆ ಅಭಿಮಾನಿಗಳು ಸಿನಿಮಾ ನೋಡಬೇಕು. ಹಾಗೇ ಹೊಸಬರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಆಗಲೇ ಕನ್ನಡ ಚಿತ್ರರಂಗ ಉಳಿಯುವುದು. ಇದರ ಜೊತೆಗೆ ಚಿತ್ರಮಂದಿರಗಳು ಉಳಿಯುತ್ತವೆ. ಹೀರೋಗಳಷ್ಟೇ ಅಲ್ಲ ಹೊಸ ನಟರ ಮೂವಿಗಳನ್ನು ಜನ ಸ್ವಾಗತ ಮಾಡಬೇಕು ಎಂದರು. ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದರು. ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದರು.