ನಾಡು ಕಂಡ ಅಪ್ರತಿಮ ನಾಯಕ.. ರಾಜಕೀಯ ಮುತ್ಸದ್ದಿ ನಮ್ಮೆಲ್ಲರನ್ನು ಅಗಲಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ನಿನ್ನೆ ಬೆಂಗಳೂರಿನ ಸದಾಶಿವನಗರದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಹುಟ್ಟೂರಾದ ಮಂಡ್ಯದ ಸೋಮಹಳ್ಳಿಯಲ್ಲಿ ಇಂದು ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಎಸ್.ಎಂ. ಕೃಷ್ಣ ಅವರಿಗೆ ಗೌರವ ನೀಡುವ ಸಲುವಾಗಿ ಸರ್ಕಾರಿ ರಜೆ ಎಂದು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಮೌನಾಚರಣೆ ಇದೆ. ಇಂದು ಅಂತ್ಯಸಂಸ್ಕಾರಕ್ಕೂ ಮುನ್ನ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
ಮಂಡ್ಯದ ಹುಟ್ಟೂರಿಗೆ ತೆಗೆದುಕೊಂಡು ಹೋಗುವ ಮುನ್ನ ಕೆಲವೊಂದು ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದವರೆಗೂ ಅಂತಿಮ ದರ್ಶನದ ವ್ಯವಸ್ಥೆ ಮಾಡಿ, ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ. ಸೋಮಹಳ್ಳಿಯಲ್ಲಿ ಎಸ್.ಎಂ.ಕೃಷ್ಣ ಅವರ ನೆಚ್ಚಿನ ಕಾಫಿ ಡೇ ಆವರಣದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಮುಂದೆ ನಿಂತು ಎಲ್ಲಾ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ತೆರೆದ ವಾಹನದ ಮೂಲಕ ಬೆಂಗಳೂರಿನ ಸದಾಶಿವನಗರದ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಮೆರವಣಿಗೆ ಮೂಲಕ ಮದ್ದೂರಿಗೆ ಹೊರಡಲಿದೆ. ಈ ಮೆರವಣಿಗೆ ಅಲ್ಲಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಿದೆ. ಕೆಂಗೇರಿ, ಬಿಡದಿ, ರಾಮನಗರ ಐಜೂರು ಸರ್ಕಲ್, ಚನ್ನಪಟ್ಟಣದ ಗಾಂಧಿ ಭವನ ಸರ್ಕಲ್ ನಲ್ಲಿ ಅಂತಿಮ ದರ್ಶನ ನೀಡಿ, ಮದ್ದೂರಿನ ಸೋಮಹಳ್ಳಿಗೆ ತಲುಪಲಿದೆ. ಮಧ್ಯಾಹ್ನದವರೆಗೂ ಸೋಮಹಳ್ಳಿಯಲ್ಲಿಯೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅಂತ್ಯ ಸಂಸ್ಕಾರ ನಡೆಯಲಿದ್ದು, ವೈದಿಕ ಪುರೋಹಿತರಾದ ಬಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ವಿಧಿವಿಧಾನದ ಮೂಲಕ ಅಂತ್ಯ ಸಂಸ್ಕಾರ ನೆರವೇರಲಿದೆ.