ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ನಗರದ ರಂಗಸೌರಭ ಕಲಾ ಸಂಘ, ವಿ.ಪಿ.ಅಕಾಡೆಮಿ, ದಿನಸಿ ಫೋರ್ಟ್ ಸೂಪರ್ ಮಾರ್ಕೇಟ್, ಸಂಯುಕ್ತ ಆಶ್ರಯದಲ್ಲಿ ನವಂಬರ್ 13 ರಂದು ನೀನಾಸಂ ತಿರುಗಾಟ 2024ರ ಎರಡನೆಯ ನಾಟಕ ಮರಾಠಿ ನಾಟಕಕಾರ ಅಭಿರಾಮ್ ಭಡ್ಕಮ್ಕರ್ ರಚಿಸಿದ, ನಾಟಕಕಾರ ಮತ್ತು ಕನ್ನಡ ಚಲನಚಿತ್ರ ಗೀತರಚನೆಕಾರ ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ ಅಂಕದ ಪರದೆ ನಾಟಕವು ವಿದ್ಯಾನಿಧಿ ವನಾರಸೆ ಪ್ರಸಾದ್ ನಿರ್ದೇಶನದಲ್ಲಿ ತ.ರಾ.ಸು ರಂಗಮಂದಿರದಲ್ಲಿ ಪ್ರದರ್ಶನ ಕಂಡಿತು.
ಆಕಾಶವಾಣಿ ಕಾರ್ಯನಿರ್ವಾಹಕ ಶಿವಪ್ರಕಾಶ್, ಸ್ಟೇಷನ್ ಇಂಜೀನಿಯರ್ ಕೆ.ಕೆ.ಮಣಿ, ರಂಗನಿರ್ದೇಶಕ ಕೆಪಿಎಮ್ ಗಣೇಶಯ್ಯ, ರಂಗಸಂಘಟಕ ಎಂ.ವಿ.ನಟರಾಜ, ಪ್ರಾಧ್ಯಾಪಕ ಎಂ.ವಿ.ನಾಗರಾಜ ಮತ್ತು ತಿರುಗಾಟದ ಸಂಚಾಲಕ ರಘು ಪುರಪ್ಪೇಮನೆ ಉಪಸ್ಥಿತರಿದ್ದು ಮಾತನಾಡಿದರು.
ಅಂಕದ ಪರದೆ ನಾಟಕವು ತಮ್ಮ ಜೀವನದ ಕಡೆಯ ವರ್ಷಗಳನ್ನು ಕಳೆಯುತ್ತಿರುವ ಹಿರಿಯ ನಾಗರಿಕರ ಒಂದು ಆಶ್ರಯಧಾಮದೊಳಗೆ ಸಂಭವಿಸುತ್ತದೆ. ಆದರೆ ಇಲ್ಲಿರುವ ವ್ಯಕ್ತಿಗಳು ಬರಿದೇ ಬದುಕಿನ ಸಂಧ್ಯಾಕಾಲವನ್ನು ನೋವಿನಿಂದ ನೂಕುತ್ತಿರುವ ಹತಾಶರಲ್ಲ. ಹಲವು ಬಗೆಯಲ್ಲಿ ಕ್ರಿಯಾಶೀಲರು. ಪತ್ನಿಯಿಂದಲೇ ಹೀಗಳೆಯಲ್ಪಟ್ಟು ಮಕ್ಕಳಿಂದಲೂ ಬೇರ್ಪಟ್ಟರೂ ಅವರೆಲ್ಲರಿಗೂ ಹಣ ಕಳಿಸುತ್ತಿರುವ ದಿಲ್ಖುಷ್ ಮನುಷ್ಯ ದೇಸಾಯಿ ಇಲ್ಲಿದ್ದಾನೆ, ಹಾಗೆಯೇ ಮಗನ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ಹಣ ಸಂಪಾದಿಸಿ ತಮ್ಮ ಆಸೆಗಳನ್ನು ಅದುಮಿಟ್ಟು ಬದುಕಿದ ನಾನಾ, ಮಾಯಿ ಎಂಬ ಗಂಡಹೆಂಡಿರು ಇಲ್ಲೀಗ ತಮ್ಮ ಹೊಸ ಬದುಕನ್ನು ಆವಿಷ್ಕರಿಸುತ್ತಿದ್ದಾರೆ, ಅಂತೆಯೇ ಬದುಕಿನುದ್ದಕ್ಕೂ ಸಮಾಜಮುಖಿ ಚಳುವಳಿಗಾರನಾಗಿ ದುಡಿದ ಭಾಯೀಜಿ ಮತ್ತು ಅವನಿಗಾಗಿಯೇ ತನ್ನ ಬದುಕನ್ನು ಮುಡುಪಿಟ್ಟ ಅವನ ಪತ್ನಿ ಸೇವಾತಾಯಿ ಇಲ್ಲೀಗ ಹಳೆಯ ನೆನಪುಗಳನ್ನು ಪರಿಷ್ಕರಿಸಿಕೊಳ್ಳುತ್ತಿದ್ದಾರೆ, ಹಳೆಯ ರಂಗಭೂಮಿಯ ಕಲಾವಿದ ಜನುಭಾಯಿ ಇಲ್ಲೀಗ ತನ್ನ ಬಣ್ಣದ ಬದುಕಿನ ರೋಮಾಂಚನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಇಂಥವರೆಲ್ಲರ ನಡುವೆ, ಹರ್ಷನೆಂಬ ಹೊಸಗಾಲದ ರಂಗಕರ್ಮಿಯೊಬ್ಬ ಈ ವಾರ್ಧಕ್ಯದ ತಥ್ಯ ತಿಳಿಯಲಿಕ್ಕೆಂದು, ತನ್ನ ತಂದೆಯ ವೇಷಾಂತರದಲ್ಲಿ ಈ ವೃದ್ಧಾಶ್ರಮಕ್ಕೆ ಸೇರಿಕೊಂಡು ಅವರೊಂದಿಗೆ ರಂಗಭೂಮಿಯ ಪಾಠಗಳನ್ನು ಕಲಿಯತೊಡಗುತ್ತಾನೆ. ಹೀಗೆ ವೃದ್ಧಾಪ್ಯವೆಂಬ ವಾಸ್ತವವು ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದ ದಿಕ್ಕಿಗೆ ನಾಟಕ ಸಾಗುತ್ತದೆ.
ನೀನಾಸಮ್ ತಿರುಗಾಟದ ಕಲಾವಿದರಾದ ಸಿ.ಅಶೋಕ್‍ಕುಮಾರ್ –ಖರೆ.ಡಾಕ್ಟರ್ ಪಾತ್ರದಲ್ಲಿ, ಡಿ.ಇಂದು –ಮಾಯಿ ಕೇಶವಿ, ಓಂಕಾರ ಮೇಗಳಾಪುರ ಮಧುಕರ, ಕೆ.ಎಚ್.ಕವಿತಾ –ರೇವತಿ, ಎಮ್.ಎಚ್.ಗಣೇಶ -ಭಾಯೀಜಿ, ದುಂಡೇಶ ಶೇ.ಹಿರೇಮಠ -ಹರ್ಷ. ದಾತೇಜಿ, ಪೂಜಿತಾ ಕೇಶವ ಹೆಗಡೆ -ಸೇವಾತಾಯಿ, ಮಮತಾ ಕಲ್ಮಕಾರ್ –ಮಾಯಿ. ಕೇಶವಿ, ಮಹಂತೇಶ್ ಬೆಳ್ಳಕ್ಕಿ –ದೇಸಾಯಿ, ಕುಣಿಗಲ್ ರಂಗ –ಜನುಭಾಯಿ, ಆರ್.ವಿನೋದ್‍ಕುಮಾರ್ -ನಾನಾ ಪಾತ್ರಗಳಲ್ಲಿ ಮನೋಜÐವಾಗಿ ಅಭಿನಯ ಮಾಡಿದರು.
ರಂಗಸೌರಭ ಕಲಾಸಂಘದ ಅಧ್ಯಕ್ಷ ಡಾ.ಕೆ.ಮೋಹನ್‍ಕುಮಾರ್, ಜಿಲ್ಲಾ ಶಸಾಪ ಅಧ್ಯಕ್ಷ ಕೆ.ಎಮ್. ವೀರೇಶ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ನಾಗರಿಕರು, ರಂಗಾಸಕ್ತರು, ಜಿಲ್ಲಾಮಟ್ಟದ ಅಧಿಕಾರಿಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಕಲಾವಿದರು, ಸಾಹಿತಿಗಳು, ಉಪನ್ಯಾಸಕರು ಮುಂತಾದವರು ನೀನಾಸಂ ತಿರುಗಾಟದ ಅಂಕದ ಪರದೆ ನಾಟಕವನ್ನು ವೀಕ್ಷಿಸಿದರು.