ಸುದ್ದಿಒನ್, ಚಿತ್ರದುರ್ಗ, ನವಂಬರ್. 04 : ಕನ್ನಡ ನಾಡಿಗೆ ಕೀರ್ತಿ ತಂದ ಸಾಧಕರು ಗ್ರಾಮೀಣ ಪ್ರದೇಶದಿಂದ ಬಂದಿರುವ ಸಾಹಿತಿಗಳು, ಕವಿಗಳು ಮತ್ತು ಕಲಾವಿದರು. ಕನ್ನಡನಾಡಿನ ಬಹುತೇಕ ಸಂತರು, ದಾರ್ಶನಿಕರು ನಮಗೆ ಆದರ್ಶರಾಗಬೇಕು. ಭವಿಷ್ಯದಲ್ಲಿ ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿರುವ ಇಂದಿನ ಮಕ್ಕಳು ಉತ್ತಮ ಸಂಸ್ಕøತಿಯ ಕರ್ತವ್ಯವನ್ನು ಮರೆತು ಅನಾಗರೀಕರಂತೆ ಜೀವಿಸುತ್ತಿರುವುದು ಆತಂಕ ತಂದಿದೆ ಎಂದು ಪ್ರಭಾರೆ ಮುಖ್ಯಶಿಕ್ಷಕ ಎಸ್.ಬಿ.ಸಣ್ಣತಿಪ್ಪಯ್ಯ ಅಭಿಪ್ರಾಯಪಟ್ಟರು.
ವಿಜಾಪುರ ಗ್ರಾಮದ ಚಿತ್ರದುರ್ಗ ವಿದ್ಯಾಸಂಸ್ಥೆಯ ಶಬರ ಶಂಕರ ವಸತಿ ಸಾಮೂಹಿಕ ಪ್ರೌಢಶಾಲೆಯ ಆವರಣದಲ್ಲಿ ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಭ್ರಮ -50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆಗಳನ್ನು ಪ್ರಯೋಗಿಕ ತರಬೇತಿ, ಕವಿಕಾವ್ಯ ಪರಿಚಯ ಹಾಗೂ ಕನ್ನಡ ಗೀತಗಾಯನದೊಂದಿಗೆ ಯೋಗ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಚೆನ್ನಾಗಿ ಓದಬೇಕು. ಪುಸ್ತಕಗಳು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುತ್ತವೆ. ಆದರೆ ಮೊಬೈಲ್‍ಗಳು ತಲೆ ತಗ್ಗಿಸುವಂತೆ ಮಾಡುತ್ತವೆ. ವಾಸ್ತವದ ಸತ್ಯ ಸಂಗತಿಯನ್ನು ಅರಿತು ಊರಿಗೆ, ದೇಶಕ್ಕೆ ಮಾದರಿಯಾಗುವ ಸಾಧನೆಯನ್ನು ಪ್ರತಿಯೊಬ್ಬರೂ ನಿರೀಕ್ಷೆಯಲ್ಲಿರುತ್ತಾರೆ. ಸಾಹಿತ್ಯ ಲೋಕಕ್ಕೆ ಸಾಹಿತಿಗಳ ಕೊಡುಗೆ ಅಪಾರವಾದುದು. ದುಶ್ಚಟಗಳಿಗೆ ಬಲಿಯಾಗದೆ, ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಬದುಕಬೇಕು ಎಂದರು.
ಹಿರಿಯ ಶಿಕ್ಷಕರಾದ ಎಂ.ಎಸ್.ಗೋವಿಂದರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೇರೆ ಭಾಷೆಗಳನ್ನು ಕಲಿಯಬಾರದು ಅಂತಲ್ಲ ಕಲಿಯಿರಿ ಆದರೆ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯವನ್ನು ಕೊಡಬೇಕು. ವ್ಯಾವಹಾರಿಕವಾಗಿ ಬೇರೆ ಭಾಷೆಗಳು ಸಹಕಾರಿ ಆಗಿವೆ, ಆದರೆ ಕನ್ನಡ ಭಾಷೆ ಮಾತ್ರ ನಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಉಳಿಸುತ್ತದೆ. ಇದರಿಂದ ಮನಸ್ಸಿಗೂ, ಮನೆತನಕ್ಕೂ ಹಾಗೂ ಸಮಾಜಕ್ಕೂ ಕೀರ್ತಿ ತರುತ್ತದೆ ಎಂದರು.
ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಹೇಳಿಕೊಟ್ಟರು. ಯೋಗ ಚಿಕಿತ್ಸಕ ಎಂ.ಬಿ.ಮುರುಳಿ ಕನ್ನಡ ಗೀತಗಾಯನದೊಂದಿಗೆ ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಯೋಗ ತರಬೇತಿ ನೀಡಿದರು. ಪ್ರಶಿಕ್ಷಣಾರ್ಥಿ ಕು.ಎಂ.ಲಕ್ಷ್ಮೀ ತ.ರಾಸು ರವರ ಕವಿಕಾವ್ಯ ಪರಿಚಯ ಮಾಡಿದರು. ಶಿಕ್ಷಕರಾದ ಬಿಂದುಶ್ರೀ, ವಿಜ್ಞಾನ ಶಿಕ್ಷಕಿ ಎಸ್.ಕಾಂಚನ, ಎಚ್.ಚಂದ್ರಮ್ಮ, ಗಣಿತ ಶಿಕ್ಷಕ ಸಿದ್ದಯ್ಯ, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಈ.ಮಹಾಂತೇಶ, ಕಛೇರಿ ಅಧೀಕ್ಷಕ ಸಂಜಯ್, ಪ್ರಶಿಕ್ಷಣಾರ್ಥಿಗಳಾದ ರವಿ, ಪೂಜಾ, ಹೀನಾ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆ.ಪಿ.ಲಾವಣ್ಯ ಪ್ರಾರ್ಥಿಸಿದರು. ಸಣ್ಣಪಾಲಯ್ಯ ವಂದಿಸಿದರು. ಜಿ.ಎನ್.ದಿವ್ಯ ನಿರೂಪಿಸಿದರು.