ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.25): ಕಳೆದ 21 ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿರುವ ಕೆ.ಎಂ.ಶಿವಸ್ವಾಮಿಗೆ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಐಶ್ವರ್ಯ ಫೋರ್ಟ್‍ನಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್‍ನ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪರಿಷತ್‍ನ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ್‍ರವರು ಜಿಲ್ಲಾ ಕಸಾಪ. ನೂತನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿರವರನ್ನು ಸನ್ಮಾನಿಸಿ ಮಾತನಾಡುತ್ತ ಎಲ್ಲಾ ಶಾಲೆಗಳಲ್ಲಿ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಹೇಳಿದರು.
ಡಿ.28 ಮತ್ತು 29 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಎರಡು ದಿನದ ವಿಜ್ಞಾನ ಸಮಾವೇಶದಲ್ಲಿ ಎಲ್ಲಾ ಶಿಕ್ಷಕರುಗಳು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜ್ಞಾನಗೋಷ್ಟಿಗಳನ್ನು ಕಣ್ತುಂಬಿಕೊಳ್ಳುವಂತೆ ವಿನಂತಿಸಿದರು.
ಈ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಓ.ಓ.ಡಿ.ಸೌಲಭ್ಯವನ್ನು ಸರ್ಕಾರದಿಂದ ಕಲ್ಪಿಸಲಾಗುವುದು. ಗಣ್ಯವ್ಯಕ್ತಿಗಳು, ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಝೆಡ್ ಪ್ಲಸ್ ಭದ್ರೆತೆಯಿರುವುದರಿಂದ ಎಲ್ಲರೂ ವಿಜ್ಞಾನ ಪರಿಷತ್ ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಜೊತೆಯಲ್ಲಿ ತರಬೇಕು. ಜೊತೆಗೆ ಎಲ್ಲರೂ ಸದಸ್ಯರಾಗುವಂತೆ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎಂ.ಶಿವಸ್ವಾಮಿ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದರ ಜೊತೆಗೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್‍ನ ರಾಜ್ಯಾಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್‍ರವರು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಕುರಿತು ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಮೂಢ ನಂಬಿಕೆ ಹೋಗಲಾಡಿಸುವಲ್ಲಿ ಜನಜಾಗೃತಿ ಮೂಡಿಸುತ್ತಿರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೈಜೋಡಿಸಲಿದೆ ಎಂದರು.
ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಂ ಮಾತನಾಡಿ ಜಿಲ್ಲೆಯಿಂದ ಕನಿಷ್ಟ ನೂರು ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದು, ಈ ಮಾಹೆ ಸದಸ್ಯತ್ವ ನೊಂದಣಿಯಾಗಿರುವುದರಿಂದ ತಪ್ಪದೆ ಸದಸ್ಯತ್ವ ಪಡೆಯುವಂತೆ ಕೋರಿದರು.
ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಕಾರ್ಯದರ್ಶಿ ಸಿ.ಲೋಕೇಶ್, ಖಜಾಂಚಿ ಬಿ.ಎ.ಬಸವರಾಜ್, ಸಂಘಟನಾ ಕಾರ್ಯದರ್ಶಿ ಎಂ.ರಂಗಪ್ಪ, ಲವಕುಮಾರ್ ಹಾಗೂ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.