ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.24): ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಚಿತ್ರದುರ್ಗ-ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಆಸಕ್ತಿ ತೋರಿಸಲಿಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೀಮಸಮುದ್ರದ ಜಿ.ಎಸ್.ಮಂಜುನಾಥ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸೋಮಶೇಖರ್ ನಾಮಪತ್ರ ಸಲ್ಲಿಕೆ ವಿಚಾರವಾಗಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾಜಿ ಸಚಿವ ಹೆಚ್.ಆಂಜನೇಯ ಚುನಾವಣೆಗೆ ಸ್ಪರ್ಧಿಸಲು ಜಿ.ಎಸ್.ಮಂಜುನಾಥ್ ಮುಂದೆ ಬರಲಿಲ್ಲ ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ.
2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ನನಗೆ ಟಿಕೆಟ್ ತಪ್ಪಿಸಿದ್ದೇ ಮಾಜಿ ಸಚಿವ ಹೆಚ್.ಆಂಜನೇಯ. ಸ್ಥಳೀಯರ ಬಗ್ಗೆ ನಿಜವಾಗಿಯೂ ಅವರಲ್ಲಿ ಒಲವಿದ್ದಿದ್ದರೆ ನನ್ನೊಡನೆ ಸಮಾಲೋಚಿಸಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಬಹುದಿತ್ತಲ್ಲವೆ ?
ಹೆಚ್.ಆಂಜನೇಯನವರಾಗಲಿ, ಪಕ್ಷದ ಹೈಕಮಾಂಡ್ ಆಗಲಿ ನನ್ನನ್ನ ಸಂಪರ್ಕಿಸಿಲ್ಲ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಮನಸ್ಸು ಖುಷಿ ಪಡಿಸುವುದಕ್ಕಾಗಿ ತಾವೇ ಸ್ವತಃ ಸೃಷ್ಟಿಸಿಕೊಂಡು ಇಂತಹ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಲ್ಲ. ಇನ್ನು ಮುಂದಾದರೂ ಇಂತಹ ಮಾತುಗಳನ್ನು ನಿಲ್ಲಿಸಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡುವಲ್ಲಿ ಮುಂದಾಗಲಿ. ಇಲ್ಲವಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಹೆಚ್.ಆಂಜನೇಯ ನೇರ ಹೊಣೆಯಾಗಲಿದ್ದಾರೆಂದು ಜಿ.ಎಸ್.ಮಂಜುನಾಥ್ ಎಚ್ಚರಿಸಿದ್ದಾರೆ.