ಮೈಸೂರು: ಇಂದು ವಿಶ್ವವಿಖ್ಯಾತ ದಸರಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಬೆಳಗ್ಗೆ 9.15ರಿಂದ 9.45 ರ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಾಹಿತಿ ಹಂಪಿ ನಾಗರಾಜಯ್ಯ ಅವರು ನಾಡದೇವಿಗೆ ಪುಷ್ಪಾರ್ಚನೆ ಮಾಡಿದರು. ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಹಲವು ಸಚಿವರು ಸಾಥ್ ನೀಡಿದರು.
ದಸರಾ ಉದ್ಘಾಟನೆಯ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ದೇವರಾಜ ಅರಸು ಬಿಟ್ಟರೆ ಐದು ವರ್ಷ ಸಿಎಂ ಆಗಿದ್ದಿದ್ದು ನಾನೇ. ಅದು ಸಿದ್ದರಾಮಯ್ಯ. ಮುಂದಿನ ಐದು ವರ್ಷಗಳಲ್ಲೂ ಕೂಡ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಈಗಲೂ ಎಷ್ಟೇ ತೊಡಕು ಬಂದರೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನನಗಿದೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು.
ನಾನು ಯಾವ ತಪ್ಪು ಮಾಡಿಲ್ಲ. ತಪ್ಪುಗಳನ್ನು ಮಾಡಿದ್ರೆ ಸುಧೀರ್ಘ ಸಮಯ ರಾಜಕೀಯದಲ್ಲಿ ಇರುತ್ತಿರಲಿಲ್ಲ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಜಿಟಿ ದೇವೇಗೌಡರು ಮತ್ತು ನಾವೂ ಒಂದೇ ತಾಲೂಕಿನವರು. ಜಿಟಿ ದೇವೇಗೌಡ ಅವರು ಸತ್ಯಕ್ಕೆ ಜಯ ಸಿಗಬೇಕು ಎಂದಿರುವುದು ನನಗೆ ಇನ್ನಷ್ಟು ಬಲ ಬಂದಿದೆ. ಅಂದು ನಾನು ಡಿಕೆ ಒಟ್ಟಿಗೆ ಬೆಟ್ಟಕ್ಕೆ ಬಂದು ಚಾಮುಂಡಿಗೆ ಪೂಜೆ ಮಾಡಿಸಿ, ಐದು ಗ್ಯಾರಂಟಿಗೆ ಶಕ್ತಿ ಕೊಡಮ್ಮ ಎಂದು ಬೇಡಿಕೊಂಡಿದ್ದೆವು. ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ. ಇದು ಚಾಮುಂಡಿ ತಾಯಿಯ ಆಶೀರ್ವಾದ ಎಂದರು.