ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 29 : ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿ ವರ್ಷವೂ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸುವುದು ಕಳೆದ ಹದಿನೆಂಟು ವರ್ಷಗಳಿಂದಲು ಹಬ್ಬದ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ನಾಡಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವುದರ ಜೊತೆಗೆ ದೇಶ ವಿದೇಶಗಳಿಂದಲೂ ಆಗಮಿಸುವ ಭಕ್ತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ.
ಗಣಪತಿ ವಿಸರ್ಜನೆಯ ಮರು ದಿನ ನಗರದಲ್ಲಿ ಲೋಡ್‍ಗಟ್ಟಲೆ ಪಾದರಕ್ಷೆಗಳು, ತಿಂಡಿ ಊಟದ ತಟ್ಟೆಗಳು, ನೀರಿನ ಬಾಟಲ್ ಹಾಗೂ ಪ್ಯಾಕೆಟ್‍ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನಗರಸಭೆ ಪೌರ ಕಾರ್ಮಿಕರು ಶುಚಿಗೊಳಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಹಾಗಾಗಿ ಅಂತಹ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಇಪ್ಪತ್ತು ಸಾವಿರ ರೂ. ಹಾಗೂ ಖಾಯಂ ಪೌರ ಕಾರ್ಮಿಕರಿಗೆ ತಲಾ ಹತ್ತು ಸಾವಿರ ರೂ.ಗಳ ಸಂಭಾವನೆ ನೀಡಿ ಶೋಭಾಯಾತ್ರೆಯ ಮುನ್ನಾ ದಿನ ಸನ್ಮಾನಿಸುವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಭಾನುವಾರ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದವರಿಗೆ ಮನವಿ ಸಲ್ಲಿಸಿದರು.
ಶೋಭಾಯಾತ್ರೆಯ ಮಾರ್ಗದರ್ಶಕ ಬದ್ರಿನಾಥ್, ಉತ್ಸವ ಸಮಿತಿ ಅಧ್ಯಕ್ಷ ನವೀನ್, ಉಮೇಶ್ ಕಾರಜೋಳ, ರವಿ ಇನ್ನು ಅನೇಕರು ಮನವಿ ಸ್ವೀಕರಿಸಿ ಮುಂದಿನ ವರ್ಷದ ಶೋಭಾಯಾತ್ರೆಯಿಂದ ಪೌರ ಕಾರ್ಮಿಕರನ್ನು ಸನ್ಮಾನಿಸುವುದಾಗಿ ಭರವಸೆ ನೀಡಿದರು.
ಕರುನಾಡ ವಿಜಯಸೇನೆಯ ಗೋಪಿನಾಥ್ ಎಸ್. ಅವಿನಾಶ್ ಪಿ. ಇವರುಗಳು ಈ ಸಂದರ್ಭದಲ್ಲಿದ್ದರು.