ಬಳ್ಳಾರಿ: ನಟ ದರ್ಶನ್ ರೇಣುಕಾಸ್ವಾಮಿ ಕೊಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಜಾಮೀನಿಗೂ ಅರ್ಜಿ ಸಲ್ಲಿಕೆ ಮಾಡಿದ್ದು, ವಿಚಾರಣೆ ಕೂಡ ನಡೆಯುತ್ತಿದೆ. ಈ ಕೇಸಲ್ಲಿ ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ಆ ಮೂವರು ಕೊಲೆಯಲ್ಲಿ ಭಾಗಿಯಾದವರಲ್ಲ. ಮೃತದೇಹ ಸಾಗಿಸಲು ಹಣ ಪಡೆದು, ಸೆರಂಡರ್ ಆದವರು. ಹೀಗಾಗಿ ಆ ಮೂವರಿಗೆ ಜಾಮೀನು ನೀಡಲಾಗಿದೆ. ಇದೀಗ ಐಟಿ ಅಧಿಕಾರಿಗಳು ದರ್ಶನ್ ಹಣದ ಮೂಲದ ಹಿಂದೆ ಬಿದ್ದಿದ್ದಾರೆ.
ಅಂದ್ರೆ ರೇಣುಕಾಸ್ವಾಮಿ ಕೊಲೆಯ ಬಳಿಕ ಮೃತದೇಹ ಸಾಗಿಸುವುದಕ್ಕೇನೆ 30 ಲಕ್ಷ ಹಣ ನೀಡಿದ್ದರು. ಹೀಗಾಗಿ ಆ ಹಣವೆಲ್ಲಾ ಎಲ್ಲಿಂದ ಬಂತು ಎಂಬ ಮೂಲ ಕಂಡು ಹಿಡಿಯಲು ಹೊರಟಿದ್ದಾರೆ. ಹೀಗಾಗಿ ದರ್ಶನ್ ಅವರನ್ನು ಭೇಟಿಯಾಗಲು ಐಟಿ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸಮಯವನ್ನು ಕೇಳಿದ್ದಾರೆ. ಸಮಯ ನೀಡಿದ ಬಳಿಕ ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದಾರೆ.
ಜೈಲು ಅಧಿಕಾರಿಗಳಿಗೆ ಈ ಸಂಬಂಧ ಈಗಾಗಲೇ ಮೇಲ್ ಕೂಡ ಬಂದಿದೆ. ದರ್ಶನ್ ಅವರ ಭೇಟಿಗೆ ಸಮಯಾವಕಾಶ ನೀಡುವಂತೆ ಮನವಿ ಮಾಡಿ ಮೇಲ್ ಮಾಡಿದ್ದಾರೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆಯ ಬಳಿಕ ಆ ಕೇಸನ್ನು ಇನ್ನೊಬ್ಬರ ಮೇಕೆ ಹಾಕುವ ಹುನ್ನಾರ ನಡೆದಿತ್ತು. ಹಣದ ಆಮಿಷವೊಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಸೂಚನೆ ನೀಡಿದ್ದರು. ಅದಕ್ಕೆ ಸರಿಯಾಗಿ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ಆ ತಪ್ಪನ್ನು ಒಪ್ಪಿಕೊಂಡು ಪೊಲೀಸರ ಮುಂದೆ ಸೆರಂಡರ್ ಆಗಿದ್ದರು. ಆಮೇಲೆ ಪೊಲೀಸರ ತನಿಖೆಯ ಬಳಿಕ ಸತ್ಯ ಹೊರಗೆ ಬಂದಿದ್ದು, ದರ್ಶನ್ ಅಂಡ್ ಗ್ಯಾಂಗ್ ಸಿಕ್ಕಿಬಿದ್ದಿತ್ತು.