ರಾಯಚೂರು: ರಾತ್ರಿ ನೆಮ್ಮದಿಯಾಗಿ ಮಟನ್ ಊಟ ಮಾಡಿ ಮಲಗಿದವರು ಬೆಳಗ್ಗೆ ಜೀವಂತವಾಗಿ ಉಳಿಯಲೇ ಇಲ್ಲ. ಈ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಮಟನ್ ಊಟ ತಿಂದವರಲ್ಲಿ ನಾಲ್ವರು ಸಾವನ್ನಪ್ಪಿದರೆ ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಆ ಮಟನ್ ತಂದ ಅಂಗಡಿ ಯಾವುದೆಂಬ ಆತಂಕದಲ್ಲಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಮಟನ್ ನಲ್ಲಿ ವಿಷ ಇರುವ ಅಂಶ ಪತ್ತೆಯಾಗಿದೆ.
ಕಲ್ಲೂರು ಗ್ರಾಮದ ಭೀಮಣ್ಣ ಕುಟುಂಬ ನಿನ್ನೆ ರಾತ್ರಿ ಮಟನ್ ತಂದು, ಅಡುಗೆ ಮಾಡಿಕೊಂಡು ಎಲ್ಲರು ತಿಂದಿದ್ದಾರೆ. ಅದಾದ ಸ್ವಲ್ಪ ಸಮಯದಲ್ಲಿಯೇ ಮನೆಯಲ್ಲಿದ್ದ ಎಲ್ಲರಿಗೂ ವಾಂತಿ, ಬೇಧಿ ಶುರುವಾಗಿದೆ. ಜಾಸ್ತಿಯಾಗಿ ಎಲ್ಲರು ನಿತ್ರಾಣಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅದರಲ್ಲಿ ಒಬ್ಬರು ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಭೀಮಣ್ಣ, ಈರಮ್ಮ, ಮಲ್ಲೇಶ್ ಹಾಗೂ ಪಾರ್ವತಿ ಸಾವನ್ನಪ್ಪಿದ್ದಾರೆ.
ರಿಮ್ಸ್ ಆಸ್ಪತ್ರೆಗೆ ರಾಯಚೂರು ಎಸ್ಪಿ ಪುಟ್ಟಮಾದಯ್ಯ ಹಾಗೂ ಡಿಹೆಚ್ಓ ಸುರೆಂದ್ರ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಟನ್ ಎಲ್ಲಿಂದ ತಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸೂಚನೆ ನೀಡಿದ್ದಾರೆ. ಈಗಾಗಲೇ ರಾಯಚೂರು ಜಿಲ್ಕಾಧಿಕಾರಿ ನಿತೀಶ್ ಕೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಭೀಮಣ್ಣ ಮನೆಯವರು ಚಪಾತಿ, ಮಟನ್ ಮತ್ತು ತರಕಾರಿ ಊಟ ಸೇವಿಸಿ ಮಲಗಿದ್ದರು. ಊಟದಲ್ಲಿ ಬಲವಾದ ವಿಷ ಸೇರಿರುವ ಅಂಶ ಬೆಳಕಿಗೆ ಬಂದಿದೆ. ಇನ್ನು ಭೀಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದರೆ, ಬಹು ಅಂಗಾಂಗ ವೈಫಲ್ಯದಿಂದ ಇನ್ನೊಬ್ಬರು ಮೃತ ಪಟ್ಟಿದ್ದಾರೆ. ಮನೆಯಲ್ಲಿನ ಊಟದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.