ಬೆಂಗಳೂರು: ಇಂದು ಮಹಾನಗರ ಪಾಲಿಕೆಗಳ ಫಲಿತಾಂಶ ಹೊರಬಿದ್ದಿದೆ. ಆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಶ್ರಮಿಸಿದ, ಮತ ಹಾಕಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಸೋಲು-ಗಿಲುವು-ಹೋರಾಟದ ಪಾಠ ಮಾಡಿದ್ದಾರೆ.
ಇಂಥಹ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಹೆಚ್ಚು ಅನುಕೂಲಗಳಿವೆ. ಬಿಜೆಪಿ ಸಂಪನ್ಮೂಲಕ್ಕೆ ನಾವೂ ಸಾಟಿಯಿಲ್ಲ. ಜೊತೆಗೆ ಆಡಳಿತ ಯಂತ್ರವನ್ನು ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ.
ಇನ್ನು ಕಲಬುರಗಿಯಲ್ಲಿ ನಮ್ಮ ಶಾಸಕಿ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಿದ್ದರು ನಮ್ಮವರು ಸಾಧನೆ ಮಾಡಿದ್ದಾರೆ. ಇನ್ನು ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶದಲ್ಲಿ 58 ಸ್ಥಾನದಲ್ಲಿ ನಾವೂ ಕೇವಲ 9 ಸ್ಥಾನ ಗಳಿಸಿದ್ದೇವೆ. ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಶಾಸಕರು, ಸಂಸದರು ಇಲ್ಲದೆ ಇರುವುದು ಕೂಡ ಸೋಲಿಗೆ ಕಾರಣ ಇರಬಹುದು ಎಂದಿದ್ದಾರೆ.
ಇನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದ್ರೆ ಕಡಜಮೆ ಅಂತರದಲ್ಲಿ ಸೋತಿದ್ದೇವೆ ಎಂದಿದ್ದಾರೆ. ಇದೇ ವೇಳೆ ನಳೀನ್ ಕುಮಾರ್ ಕಟೀಲು ನೀಡಿದ್ದ ಪಾಲಿಕೆ ಚುನಾವಣೆಯ ಫಲಿತಾಂಶ, ಜನ ಬಿಜೆಪಿ ಪರ ಇದ್ದಾರೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಅವರ ರಾಜಕೀಯ ಜ್ಞಾನದ ಕೊರತೆಯನ್ನ ತೋರಿಸುತ್ತದೆ. ಬೆಳಗಾವಿ ಬಿಟ್ಟರೆ ಬೇರೆಲ್ಲಿ ಬಹುಮತ ಪಡೆದಿದೆಯಂತೆ ಎಂದು ಗರಂ ಆಗಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರರಿಗೆ ಮತ್ತು ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದು, ಜೊತೆಗೆ ಸೋಲು ಗೆಲುವುಗಳು ನಿರೀಕ್ಷಿತ. ಹೋರಾಟ ನಿರಂತರ ಎಂದು ಧೈರ್ಯ ತುಂಬಿದ್ದಾರೆ.