ಸುದ್ದಿಒನ್ : ಪ್ರತಿಷ್ಠಿತ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತವು ಪದಕವನ್ನು ಗೆದ್ದುಕೊಡು ಪದಕದ ಖಾತೆ ತೆರೆಯಲಾಗಿದೆ. ಪ್ಯಾರಿಸ್ ಕ್ರೀಡಾಕೂಟದ ಎರಡನೇ ದಿನವಾದ ಇಂದು (ಜುಲೈ 28) ಭಾರತ ತನ್ನ ಮೊದಲ ಪದಕವನ್ನು ಗೆದ್ದುಕೊಂಡಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕ ಪಡೆದರು.
ಇದರೊಂದಿಗೆ ಭಾಕರ್ ವೈಯಕ್ತಿಕ ಶೂಟಿಂಗ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದರು. ಫೈನಲ್‌ನಲ್ಲಿ 221.7 ಅಂಕ ಗಳಿಸಿದ 22 ವರ್ಷದ ಮನು ಭಾಕರ್ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಿಸ್ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿತು.
12 ವರ್ಷಗಳ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಪದಕ ಲಭಿಸಿದೆ. ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ವಿನಯ್ ಕುಮಾರ್ ಬೆಳ್ಳಿ ಮತ್ತು ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು. ಹನ್ನೆರಡು ವರ್ಷಗಳ ನಿರೀಕ್ಷೆಯ ನಂತರ ಇದೀಗ ಭಾರತಕ್ಕೆ ಶೂಟಿಂಗ್‌ನಲ್ಲಿ ಪದಕ ಲಭಿಸಿದೆ. ಮಹಿಳೆಯರ ವಿಭಾಗದಲ್ಲಿ ಭಾಕರ್ ವೈಯಕ್ತಿಕ ಪದಕ ಗೆದ್ದ ಭಾರತದ ಮೊದಲ ಶೂಟರ್ ಎನಿಸಿಕೊಂಡರು.
ಟೋಕಿಯೋದಲ್ಲಿ ಕಣ್ಣೀರು..ಈಗ ಇತಿಹಾಸ :
2021ರ ಟೋಕಿಯೊ ಒಲಿಂಪಿಕ್ಸ್‌ನಿಂದ ಮನು ಭಾಕರ್ ಅನಿರೀಕ್ಷಿತವಾಗಿ ಹಿಂದೆ ಸರಿದಿದ್ದರು. ಪಿಸ್ತೂಲ್ ಅಸಮರ್ಪಕ ಕಾರ್ಯದಿಂದಾಗಿ ಅವರು ಅರ್ಹತಾ ಸುತ್ತಿನಲ್ಲಿ ನಿರ್ಗಮಿಸಬೇಕಾಯಿತು. ಇದರಿಂದಾಗಿ ಮನು ಕಣ್ಣೀರು ಸುರಿಸಿದ್ದರು. ಇದೀಗ ಮೂರು ವರ್ಷಗಳ ನಂತರ ಪ್ಯಾರಿಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಮನು ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಫೈನಲ್ ತಲುಪಿದ್ದರು. ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು.
ಮಹಿಳೆಯರ 10 ಮೀಟರ್ ಪಿಸ್ತೂಲ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ವೈಜೆ ಓಹ್ 243.2 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನದ ಪದಕ ಗೆದ್ದರು. ಇದೇ ದೇಶದ ವೈಜೆ ಕಿಮ್ 241.3 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಇವೆರಡರ ನಡುವಿನ ವ್ಯತ್ಯಾಸ ಕೇವಲ 0.1 ಪಾಯಿಂಟ್. ಮನು ಭಾಕರ್ 221.7 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.