ಚಿತ್ರದುರ್ಗ, (ಸೆ.06) : ಅಕ್ಟೋಬರ್ 8 ರಿಂದ 12ರವರೆಗೆ ಶರಣ ಸಂಸ್ಕೃತಿ ಉತ್ಸವ-2021ರ ಅಂಗವಾಗಿ ಜಮುರಾ ಕಪ್-21 ಅಖಿಲ ಭಾರತ ಆಹ್ವಾನಿತ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾಹಿತಿ ನೀಡಿದ ಶ್ರೀಗಳು, ಶರಣಸಂಸ್ಕøತಿ ಉತ್ಸವದ ವಿಶೇಷತೆಯೆಂದರೆ ಯುವಜನರನ್ನು ಒಟ್ಟುಗೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಉತ್ಸವದ ಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಶ್ರೀಮಠವು ಶರಣಸಂಸ್ಕøತಿ ಉತ್ಸವದ ಸಂದರ್ಭದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ ನೀಡುತ್ತ ಬಂದಿದೆ. ಈ ಬಾರಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಶ್ರೀಗಳ ಪೀಠಾರೋಹಣವಾಗಿ 30ವರ್ಷ ಕಳೆದಿದೆ. ಆದುದರಿಂದ ಕ್ರೀಡೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದೇವೆ.
ಚಿತ್ರದುರ್ಗದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ಪಂಜಾಬ್ ಪೊಲೀಸ್, ಇಂಡಿಯನ್ ಓವರ್‍ಸಿಸ್ ಬ್ಯಾಂಕ್, ಕರ್ನಾಟಕ, ಹರಿಯಾಣ ಸ್ಟೇಟ್ ಇಂಡಸ್ಟ್ರೀಯಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್, ಎಸ್.ಆರ್.ಎಂ. ಯುನಿವರ್ಸಿಟಿ ಚೆನ್ನೈ, ಆಲ್ ಇಂಡಿಯಾ ಇನ್‍ಕಂ ಟ್ಯಾಕ್ಸ್ ಗುಜರಾತ್, ಆರ್ಮಿ (ಸರ್ವೀಸಸ್), ಇಂಡಿಯನ್ ರೈಲ್ವೆ ನಿಂದ ಪುರುಷ ತಂಡಗಳು ಹಾಗು ಕರ್ನಾಟಕ, ಕೇರಳ, ಸೌತ್ ಸೆಂಟ್ರಲ್ ರೈಲ್ವೆ ಸಿಕಂದರಾಬಾದ್, ವೆಸ್ಟ್ರನ್ ರೈಲ್ವೆ ಮುಂಬಯಿ ಮತ್ತು ತಮಿಳುನಾಡಿನಿಂದ ಮಹಿಳಾ ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ನಂದಕುಮಾರ್, ಸಂಚಾಲಕ ಕೆ.ವೆಂಕಟೇಶ್, ಚಿತ್ರದುರ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಬು, ಉಪಾಧ್ಯಕ್ಷ ಶ್ರೀನಿವಾಸ್, ನಿರ್ದೇಶಕ ನಿಶ್ಚಿತ್, ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ವೈ.ಬಿ.ಮಹೇಂದ್ರನಾಥ್, ಶರಣಸಂಸ್ಕøತಿ ಉತ್ಸವ ಕಾರ್ಯದರ್ಶಿ ಭರತ್‍ಲಿಂಗಣ್ಣ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಇದ್ದರು.