ಸುದ್ದಿಒನ್, ಚಿತ್ರದುರ್ಗ, ಜೂ.19 : ರಾಜ್ಯದಲ್ಲಿ 66 ಲಕ್ಷ ಹೆಕ್ಚೇರು ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಅವಕಾಶವಿದೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ನೂತನ ಸದಸ್ಯ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಬುಧವಾರ ಸ್ಕೌಟ್ ಭವನದಲ್ಲಿ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇದರಲ್ಲಿ 40 ಲಕ್ಷ ಬೃಹತ್ ನೀರಾವರಿ, 10 ಲಕ್ಷ ಹೆಕ್ಟೇರು ಸಣ್ಣನೀರಾವರಿ ಹಾಗೂ 16 ಲಕ್ಷ ಹೆಕ್ಟೇರು ರೈತರಿಂದ ಸ್ವಂತ ಖರ್ಚಿನಲ್ಲಿ ಅಂದರೆ ಬೋರ್ ವೆಲ್ ಮೂಲಕ ನೀರಾವರಿ ಮಾಡಿಕೊಳ್ಳಬಹುದಾಗಿದೆ. ಇದುವರೆಗೂ 30 ಲಕ್ಷ ಹೆಕ್ಟೇರು ಮಾತ್ರ ಬೃಹತ್ ನೀರಾವರಿಯಾಗಿದ್ದು ಇನ್ನೂ ಹತ್ತ ಲಕ್ಷ ಹೆಕ್ಟೇರು ಬಾಕಿ ಇದೆ. ಅದೇ ರೀತಿ ಸಣ್ಣ ನೀರಾವರಿಯ ಹತ್ತು ಲಕ್ಷ ಹೆಕ್ಚೇರ್ ನಲ್ಲಿ ಏಳು ಲಕ್ಷ ಮಾತ್ರ ಸಾಧ್ಯವಾಗಿದ್ದು ಇನ್ನೂ ಮೂರು ಲಕ್ಷ ಹೆಕ್ಚೇರು ಬಾಕಿ ಇದೆ ಎಂದರು.
ದೇಶದಲ್ಲಿ ಎರಡು ಜಿಲ್ಲೆಗಳು ಮಾತ್ರ ಕಳೆದ 350 ವರ್ಷಗಳಿಂದ ಭೀಕರ ಬರಗಾಲ ಎದುರಿಸಿದ್ದವು. ಒಂದು ರಾಜಸ್ತಾನದಲ್ಲಿದ್ದರೆ ಮತ್ತೊಂದು ಅವಿಭಜಿತ ವಿಜಯಪುರ ಜಿಲ್ಲೆಯಾಗಿತ್ತು. ಆದರೆ ಆಲಮಟ್ಟಿ ಜಲಾಶಯ ನಿರ್ಮಾಣದಿಂದಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಈಗ ಬರದಪಟ್ಟಿಯಿಂದ ಹೊರ ಬಂದಿದ್ದು ಈ ಸ್ಥಾನವ ಚಿತ್ರದುರ್ಗ ಪಡೆದಿದೆ. ದೇಶದಲ್ಲಿಯೇ ಬರದ ಪರಿಸ್ಥಿತಿ ಎದುರಿಸುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಎರಡನೇ ಸ್ಥಾನದಲ್ಲಿದೆ . ಈ ಜಿಲ್ಲೆಗಳಿಂದ ಪ್ರತಿ ವರ್ಷ ಐವತ್ತು ಸಾವಿರ ಮಂದಿ ಗುಳೇ ಹೋಗುತ್ತಿದ್ದಾರೆ. ಬೆಂಗಳೂರಿಗೆ ಚಿತ್ರದುರ್ಗ ಹತ್ತಿರದಲ್ಲಿದ್ದರೂ ಏಕೆ ಅಭಿವೃದ್ದಿಯಾಗಿಲ್ಲವೆಂಬುದು ತಿಳಿಯದಾಗಿದೆ ಎಂದರು.
ಬೃಹತ್ ಕೈಗಾರಿಕೆಗಳು ಬಂದರೆ ಒಂದಿಷ್ಟು ಲಾರಿಗಳು, ಲಾರೀ ಮಾಲೀಕರಿಗೆ ಅನುಕೂಲವಾಗುತ್ತದೆ. ಆದರೆ ನೀರಾವರಿ ಮಾತ್ರ ಎಲ್ಲ ವರ್ಗ, ಸಮುದಾಯದ ಬದುಕನ್ನು ಹಸನಾಗಿಸಬಲ್ಲದು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಬಾಗಲಕೋಟೆ ಜಿಲ್ಲೆ ಜನ ನಿರಂತರ 40 ವರ್ಷ ಹೋರಾಟ ಮಾಡಿ ಯಶ ಕಂಡಿದ್ದಾರೆ. ಆಲಮಟ್ಟಿ ಜಲಾಶಯದಿಂದ 22 ಲಕ್ಷ ಹೆಕ್ಟೇರು ಪ್ರದೇಶವ ನೀರಾವರಿಗೆ ಒಳಪಡಿಸಬಹುದಾಗಿದ್ದು ಏಷ್ಯಾದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಜಲಾಶಯ ನಿರ್ಮಾಣಕ್ಕಾಗಿ 1.32 ಲಕ್ಷ ಹೆಕ್ಚೇರು ಭೂಮಿ ಮುಳುಗಡೆಯಾಗಿದೆ ಎಂದರು.
ಬಾಗಲಕೋಟೆಯಿಂದ ನಿಜಲಿಂಗಪ್ಪ ಅವರನ್ನು ಅಲ್ಲಿನ ಮಂದಿ ಗೆಲ್ಲಿಸಿದಾಗ ಸುಮ್ಮನೆ ಬಿಡಲಿಲ್ಲ. ಆಲಮಟ್ಟಿ ಜಲಾಶಯಕ್ಕೆ ಗುದ್ದಲಿ ಪೂಜೆ ಹಾಕಿಸಿದರು. 1964 ಮೇ ತಿಂಗಳಲ್ಲಿ ನಡೆದ ಅಡಿಗಲ್ಲು ಸಮಾರಂಭಕ್ಕೆ ಲಾಲ್ ಬಹದ್ದೂರ್ ಶಾಸ್ತಿ, ಎಸ್.ನಿಜಲಿಂಗಪ್ಪ, ಇಂದಿರಾಗಾಂಧಿ ಬಂದಿದ್ದರು. ಚೀನಾ ಯುದ್ದದಿಂದಾಗಿ ದೇಶದಲ್ಲಿ ಬರ ಪರಿಸ್ಥಿತಿ ಇದ್ದರೂ ವಿಜಯಪುರದ ಮಂದಿ ಈ ಮೂವರನ್ನು ಬಂಗಾರದಿಂದ ತುಲಾಭಾರ ಮಾಡಿದ್ದರು. ತುಲಾಭಾರ ಮಾಡುವಾಗ ಬಂಗಾರ ಸಾಲದು ಬಂದಾಗ ಕಾರ್ಯಕ್ರಮದಲ್ಲಿದ್ದ ಮಹಿಳೆಯರು ತಮ್ಮ ಮೈಮೇಲಿನ ಬಂಗಾರದ ಸರ ಹಾಕಿ ಸರಿದೂಗಿಸಿದ್ದರು. ನಮ್ಮ ಭಾಗಕ್ಕೆ ನೀರಾವರಿ ಆಗಬೇಕೆಂಬ ತುಡಿತ ಆ ಮಹಿಳೆಯರಲ್ಲಿ ಇತ್ತು. ಇಂದು ಸಾಕಾರಗೊಂಡಿದೆ ಎಂದರು.
ಎನ್ ಡಿಎ ಸರ್ಕಾರದ ರಾಯಭಾರಿಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಚಿತ್ರದುರ್ಗದಿಂದ ಗೆದ್ದಿದ್ದೇನೆ. ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿಸಲು ತಾವೇ ಖುದ್ದು ಕಡತಗಳ ಬಗಲಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರದ ಮುಂದೆ ಓಡಾಡಿದ್ದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಮಾತ್ರ ಬಾಕಿ ಇದೆ. 2023-24ರ ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರುಪಾಯಿ ಅನುದಾಯ ಕಾಯ್ದಿರಿಸಿದ್ದು ಅದನ್ನು ತರುವ ಪ್ರಯತ್ನ ಮಾಡುತ್ತೇನೆ. ತುಮಕೂರಿನಿಂದ ಗೆದ್ದಿರುವ ಸೋಮಣ್ಣ ಜಲಶಕ್ತಿ ಸಚಿವರಾಗಿರುವುದರಿಂದ ಅವರೊಟ್ಟಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುವುದಾಗಿ ಗೋವಿಂದ ಕಾರಜೋಳ ಹೇಳಿದರು.
ಭದ್ರಾ ಮೇಲ್ದಂಡೆಗಾಗಿ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ನಾನು ದನಿಯಾಗುವೆ. ನಿಮ್ಮೊಡನೆ ಜೊತೆಗಿದ್ದು ಹೋರಾಟ ಮಾಡುವೆ. ಇನ್ನೆರೆಡು ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಆಲಮಟ್ಟಿ ಜಲಾಶಯ ನಿರ್ಮಾಣ ಮಾಡುವಾಗ ರಾಜ್ಯ ಸರ್ಕಾರ ಕೃಷ್ಣ ಜಲಭಾಗ್ಯ ನಿಗಮದ ಮೂಲಕ ಬಾಂಡ್ ಬಿಡುಗಡೆ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡಿತ್ತು. ಭದ್ರಾ ಮೇಲ್ಡಂಡೆಗೆ ಅನುದಾನದ ಕೊರತೆಯಾದರೆ ಬಾಂಡ್ ಮೂಲಕ ಹಣ ಸಂಗ್ರಹಿಸಲಿ. ಜಿಲ್ಲೆಯ ಉದ್ಯಮಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಕೊಂಡುಕೊಳ್ಳುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ,ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ,ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ದೊಡ್ಡಸಿದ್ದವ್ವನಹಳ್ಳಿ ಸುಧಾ, ಜಗಳೂರು ಯಾದವರೆಡ್ಡಿ, ಹಿರೇ ಕಬ್ಬಿಗೆರೆ ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಜಿ.ಬಿ.ಶೇಖರ್, ಸಿಪಿಐ ನ ಜಿಲ್ಲಾ ಕಾರ್ಯದರ್ಶಿ ಜಿ.ಸುರೇಶ್ ಬಾಬು ಇದ್ದರು. ಸಮಿತಿ ಸಂಚಾಲಕ ಜಿಕ್ಕಪ್ಪನಹಳ್ಳಿ ಷಣ್ಮುಖ ಪ್ರಾಸ್ತಾವಿಕ ಮಾತುಗಳನ್ನಾಡಿದರು.