ಹುಬ್ಬಳ್ಳಿ: ಇತ್ತಿಚೆಗಷ್ಟೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ದಿಂಗಾಲೇಶ್ವರ ಸ್ವಾಮೀಜಿ, ಇದೀಗ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತಿದ್ದರು. ತಮ್ಮ ಸೂಚಕರಾದ ಸಚ್ಚಿನ್ ಪಾಟೀಲ್ ಹಾಗೂ ಅಮೃತ ಬಳ್ಳೊಳ್ಳಿ ಮೂಲಕ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಸ್ವಾಮೀಜಿ ಸೂಚನೆಯಂತೆ ಇಬ್ಬರು ಚುನಾವಣಾ ಆಯೋಗಕ್ಕೆ ಹೋಗಿ ನಾಮಪತ್ರ ವಾಪಾಸ್ ಪಡೆದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರುಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಇದನ್ನು ಆರಂಭದಲ್ಲಿಯೇ ವಿರೋಧಿಸಿದ್ದರು. ಅಭ್ಯರ್ಥಿ ಬದಲಾಯಿಸುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಜಗ್ಗದೆ ಬಗ್ಗದೆ ಪ್ರಹ್ಲಾದ್ ಜೋಶಿ ಅವರನ್ನೇ ಮುಂದುವರೆಸಿತ್ತು. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾನೇ ನಿಲ್ಲುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡಿದ್ದರು. ಮಠಾಧಿಪತಿಗಳು ಕೂಡ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದ್ದರು. ಆದರೂ ಹಿಂದೆ ಸರಿಯದ ಸ್ವಾಮೀಜಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದೀಗ ವಾಪಾಸ್ ಪಡೆದಿದ್ದಾರೆ.
ಬಿಜೆಪಿ ನಾಯಕರು ಕೂಡ ಸ್ವಾಮೀಜಿ ಅವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಿದ್ದರು. ಅದು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ನಿಂದ ಕೂಡ ಮನವಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕರೆ ಮಾಡಿ ಮನವಿ ಮಾಡಿದ್ದರು. ನೀವೂ ಕಣದಲ್ಲಿಯೇ ಉಳಿದರೆ, ನಮಗೂ ಹಾಗೂ ನಿಮಗುಇ ಸಿಗುವ ವೋಟ್ ಡಿವೈಡ್ ಆಗುತ್ತವೆ. ಜೋಶಿ ಗೆಲುವು ಸುಲಭವಾಗುತ್ತದೆ. ನಿಮ್ಮ ಸ್ಪರ್ಧೆ ಮೊದಲೇ ಗೊತ್ತಿದ್ದರೆ ನಮ್ಮ ಪಕ್ಷದಿಂದಾನೇ ಅವಕಾಶ ಮಾಡಿಕೊಡಬಹುದಿತ್ತು. ಈಗ ನಮ್ಮ ಪಕ್ಷದಿಂದ ವಿನೋದ್ ಅಸೂಟಿ ಅವರಿಗೆ ಟಿಕೆಟ್ ನೀಡಿದ್ದೇವೆ. ಹೀಗಾಗಿ ನಾವಿಬ್ಬರು ಸೇರಿ ಅವರ ವಿರುದ್ಧ ಹೋರಾಡಬೇಕು ಎಂದಿದ್ದರಂತೆ. ಹೀಗಾಗಿ ಈಗ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಾಸ್ ಪಡೆದಿದ್ದು, ಕಾಂಗ್ರೆಸ್ ಗೆ ಬೆಂಬಲ ನೀಡಬಹುದು ಎನ್ನಲಾಗುತ್ತಿದೆ.