ಟಾಮ್ ಅಂಡ್ ಜೆರ್ರಿ ಎಂಬ ಇಂಟ್ರಸ್ಟಿಂಗ್ ಟೈಟಲ್ ಹೊತ್ತಿರೋ ಮುದ್ದಾದ ಕಿತ್ತಾಟದ ಕಹಾನಿಯನ್ನ ರಾಘವ್ ವಿನಯ್ ಶಿವಗಂಗೆ ನಿರ್ದೇಶಿಸಿ ತೆರೆ ಮೇಲೆ ತರೋ ಪ್ಲ್ಯಾನ್ ಮಾಡಿರೋದು ಈಗಾಗಲೇ ಚಂದನವನದಲ್ಲಿ ಸುದ್ದಿಯಾಗಿತ್ತು. ಇದೀಗ ನಾಳೆ ಚಿತ್ರ ಬಿಡುಗಡೆಯಾಗುತ್ತಿದೆ.
ಚಿತ್ರದ ‘ಹಾಯಾಗಿದೇ ಎದೆಯೊಳಗೆ ಝಲ್ಲೆಂದಿದೇ ಈ ಘಳಿಗೆ’ ಹಾಡು ಎಲ್ಲರನ್ನ ತನ್ನತ್ತ ಸೆಳೆದಿತ್ತು. ಈ ಹಾಡನ್ನ ನೋಡಿದ ಮೇಲಂತೂ ಇದೊಂದು ಮುದ್ದಾದ ಜೋಡಿಗಳ ಪ್ರೇಮ ಕಥೆ ಅಂದುಕೊಂಡವರಿಗೆ ಮತ್ತೆ ಟ್ರೈಲರ್ ರಿಲೀಸ್ ಮಾಡೋ ಮೂಲಕ ಚಿತ್ರತಂಡ ಒಂದೊಳ್ಳೆ ಟ್ವಿಸ್ಟ್ ಕೊಟ್ಟಿದೆ. ಇಲ್ಲಿ ಪ್ರೀತಿಯ ಜೊತೆ ಜೊತೆಗೆ ಬದುಕಿನ ವಾಸ್ತವಗಳ ಬಗ್ಗೆಯೂ ಹೇಳಲಾಗಿದೆ. ಬದುಕೆಂದರೆ ಪ್ರೀತಿ, ಸ್ನೇಹ, ಕೋಪ, ಹತಾಶೆ, ಹಟ, ಛಲ, ಸಾಧನೆ ಎಂಬ ಎಲ್ಲ ಸಂಗತಿಗಳು ಒಂದೊಂದಾಗಿ ಗರಿ ಬಿಚ್ಚುತ್ತವೆ.
ನಿಶ್ಚಿತ್ ಕೆರೋಡಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ರೆ, ಈಗಾಗಲೇ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಚೈತ್ರಾ ರಾವ್ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮಧ್ಯಮ ವರ್ಗದ ನಾಯಕನ ಪಾಲಿಗೆ ಶ್ರೀಮಂತಿಕೆಯೆಂಬುದೊಂದು ಕನಸು. ಆದರೂ ಕಷ್ಟ ಪಟ್ಟು ತನ್ನ ಕನಸಿನ ಜಗತ್ತನ್ನು ತಲುಪಲೇಬೇಕೆಂಬ ಗುರಿ ಹೊತ್ತ ನಾಯಕ. ಶ್ರೀಮಂತಿಕೆಯಲ್ಲೇ ಬದುಕುತ್ತಿರೋ ನಾಯಕಿಗೆ ಅದರಾಚೆಗೆ ಇರುವ ಸಹಜ ಬದುಕಿನತ್ತ ಒಲವು. ಈ ಎರಡು ಡಿಫರೆಂಟ್ ಕ್ಯಾರೆಕ್ಟರುಗಳು ಲವ್ವಲ್ಲಿ ಬಿದ್ದರೆ ಏನಾಗಬಹುದು? ಪರಸ್ಪರ ಇಂಗಿತಗಳು ವಿರುದ್ದವಾಗಿದ್ದರೂ ಇಲ್ಲಿ ಪ್ರೀತಿ ಹೇಗೆ ಕವಲೊಡೆಯಲು ಸಾಧ್ಯ? ಸದಾ ಕಾಲವೂ ಕಿತ್ತಾಡುತ್ತಾ ಅದರ ನಡುವೆಯೇ ಗಾಢವಾಗಿ ಪ್ರೀತಿಸೋ ಈ ಎರಡು ಪಾತ್ರಗಳ ಮೂಲಕ ಬೇರೆಯದ್ದೇ ಜಗತ್ತನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಲಿದೆ ಈ ಚಿತ್ರ.
ಸಿನಿಮಾ ರಿಲೀಸ್ ಗೂ ಮೊದಲು ಆರಂಭಿಕವಾಗಿ ಸೆಳೆಯುವುದು, ಪ್ರೇಕ್ಷಕರ ಮನಸಲ್ಲಿ ರಿಜಿಸ್ಟರ್ ಆಗೋದು ಚಿತ್ರದ ಹಾಡುಗಳೇ. ಹಾಡುಗಳು ಹಿಟ್ ಆದರೆ ಸಿನಿಮಾ ಕೂಡಾ ಹಿಟ್ಟಾಗುತ್ತೆ ಅನ್ನೋ ನಂಬಿಕೆ ಇದೆ. ಅದರ ಪ್ರಕಾರವಾಗಿ ನೋಡೋದಾದರೆ ಟಾಮ್ ಆಡ್ ಜೆರ್ರಿಯ ಗೆಲುವು ಈಗಾಗಲೇ ನಿಚ್ಚಳವಾಗಿದೆ. ಯಾಕಂದ್ರೆ ಹಾಯೆನಿಸೋ ಹಾಡುಗಳ ಹಂಗಾಮವನ್ನೇ ಸೃಷ್ಟಿಸಿದ್ದಾರೆ ಸಂಗೀತ ನಿರ್ದೇಶಕ ಮ್ಯಾಥ್ಯೂಸ್ ಮನು.
ರಿದ್ಧಿ ಸಿದ್ಧಿ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರೋ ಈ ಚಿತ್ರವನ್ನು ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದು, ಕಾರ್ಯ ಕಾರಿ ನಿರ್ಮಾಪಕರಾಗಿ ವಿನಯ್ ಚಂದ್ರ ಕೂಡ ಸಾಥ್ ನೀಡಿದ್ದಾರೆ. ಸಂಕೇತ್ ವೈಎಂಎಸ್ ಛಾಯಾಗ್ರಹಣ, ಸೂರಜ್ ಅಂಕೋಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ರಾಜ್ ಕಿಶೋರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಜೈ ಜಗದೀಶ್, ತಾರಾ ಅನುರಾಧ, ಸೂರ್ಯಶೇಖರ್, ಕೋಟೆ ಪ್ರಭಾಕರ್, ಕಟ್ಟಿಪುಡಿ ಚಂದ್ರು, ಪದ್ಮಜಾ ರಾವ್, ರಾಕ್‌ಲೈನ್ ಸುಧಾಕರ್, ಪ್ರಕಾಶ್ ತುಮ್ಮಿನಾಡು, ಮೈತ್ರಿ ಜಗ್ಗಿ, ಪ್ರಶಾಂತ್ ಒಳಗೊಂಡ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ.