ದಾವಣಗೆರೆ, (ನ.09): ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ದಾವಣಗೆರೆ ವತಿಯಿಂದ 2021-22ನೇ ಸಾಲಿನಲ್ಲಿ ಆರ್.ಕೆ.ವಿ.ವೈ ಯೋಜನೆಯಡಿ ಕುರಿ/ಮೇಕೆ ಘಟಕ (10+01) ಸ್ಥಾಪನೆಗಾಗಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಗೆ ಒಟ್ಟು ಗುರಿ 10 ಘಟಕಗಳ ಅನುಷ್ಠಾನದ ಗುರಿ ನಿಗದಿಪಡಿಸಲಾಗಿದ್ದು, ಈ ಪೈಕಿ ಪ.ಜಾ-02, ಪ.ಪಂ-01, ಸಾಮಾನ್ಯ ವರ್ಗದವರಿಗೆ 07 ಘಟಕ ಮಂಜೂರಾತಿಗೆ ಗುರಿ ನಿಗದಿಪಡಿಸಿದೆ.
ಈ ಯೋಜನೆಯು ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 18 ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ 18 ರಿಂದ 60 ವರ್ಷ ವಯೋಮಿತಿಯ ಪುರುಷ ಸದಸ್ಯರನ್ನು ಹಾಗೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಇಲ್ಲದೇ ಇರುವ ಜಿಲ್ಲೆ, ತಾಲೂಕುಗಳಲ್ಲಿಯೂ ಸಹ, ಕುರಿ ಸಾಕಾಣಿಕೆದಾರರನ್ನು ಫಲಾನುಭವಿಗಳನ್ನಾಗಿ ಸರ್ಕಾರದಿಂದ ರಚಿಸಲಾಗಿರುವ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಯೋಜನೆಯಡಿ ಈ ಹಿಂದೆ ಸಹಾಯಧನ ಪಡೆದಿರುವ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಪುನರ್ ಆಯ್ಕೆ ಮಾಡಲಾಗುವುದಿಲ್ಲ.
ಯೋಜನೆಗೆ ಸಂಬಂದಿಸಿದ ನಿಗದಿತ ಅರ್ಜಿಗಳನ್ನು ಆಯಾ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರು/ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯವರಿಂದ ಪಡೆದು ಭರ್ತಿಮಾಡಿದ ಅರ್ಜಿಯನ್ನು ನ.24 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಅರ್ಜಿಯನ್ನು ನಿಗದಿತ ನಮೂನೆಯಲ್ಲಿ (ತ್ರಿಪ್ರತಿ), ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ದೃಢೀಕೃತ ಪ್ರತಿ, ಪಡಿತರ ಚೀಟಿ, ಸಂಘದ ಸಭಾ ನಡವಳಿಗಳ ಪ್ರತಿ ಮತ್ತು ಸದಸ್ಯತ್ವದ ಪ್ರತಿ, ಕುರಿ/ಮೇಕೆ ಪಾಸ್ ಪುಸ್ತಕದ ಪ್ರತಿ, ಕುರಿ/ಮೇಕೆ ಸಾಕಾಣಿಕೆಯಲ್ಲಿ ತರಬೇತಿ ಹೊಂದಿದ್ದಲ್ಲಿ ದಾಖಲೆ ಲಗತ್ತಿಸಿ ನ. 24 ರ ಒಳಗಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಯನ್ನು ಆಯಾ ತಾಲ್ಲೂಕುಗಳ ಪಶು ಆಸ್ಪತ್ರೆ, ಸಹಾಯಕ ನಿರ್ದೇಶಕರು (ಆಡಳಿತ) ಪಶುಪಾಲನಾ ಇಲಾಖೆ ಇವರಿಂದ ಪಡೆಯಬಹುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಪಶು ಆಸ್ಪತ್ರೆ ಆವರಣ, ಅರುಣ ಟಾಕೀಸ್ ಎದುರು, ಪಿ.ಬಿ. ರಸ್ತೆ, ದಾವಣಗೆರೆ ಇವರನ್ನು ಸಂಪರ್ಕಿಸಬಹುದು