ಸುದ್ದಿಒನ್ : ಭೂಕಂಪದ ದುರಂತದಿಂದ ಜಪಾನ್ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ರಾಜಧಾನಿ ಟೋಕಿಯೊ ಸಮೀಪದ ಹನೆಡಾ ವಿಮಾನ ನಿಲ್ದಾಣದಲ್ಲಿ ಭಾರಿ ಅಪಘಾತ ಸಂಭವಿಸಿದೆ.
ಲ್ಯಾಂಡಿಂಗ್ ನಂತರ, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ರನ್‌ವೇಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡು ಉರಿಯಿತು. ಈ ಘಟನೆಯಲ್ಲಿ ಐವರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಅದೃಷ್ಟವಶಾತ್ ಅಪಘಾತಕ್ಕೀಡಾದ ಇನ್ನೊಂದು ವಿಮಾನದ ಎಲ್ಲಾ 379 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ದೂರದರ್ಶನವು ದೃಶ್ಯಾವಳಿಗಳನ್ನು ಪ್ರಸಾರ ಮಾಡಿದೆ. ಜಪಾನ್ ಏರ್‌ಲೈನ್ಸ್ ವಿಮಾನವು ರನ್‌ವೇ ಮೇಲೆ ಇಳಿದ ನಂತರ ಬಾರಿ ಬೆಂಕಿ ಕಾಣಿಸಿಕೊಂಡಿದೆ. ಜಪಾನ್ ಏರ್‌ಲೈನ್ಸ್ ಫ್ಲೈಟ್ 516 ಜಪಾನ್‌ನ ಶಿನ್ ಚಿಟೋಸ್ ವಿಮಾನ ನಿಲ್ದಾಣದಿಂದ ಹನೆಡಾಗೆ ಆಗಮಿಸಿದಾಗ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಜಪಾನ್ ಏರ್‌ಲೈನ್ಸ್ ವಿಮಾನವು ರನ್‌ವೇಯಲ್ಲಿ ನಿಂತಿದ್ದ ಜಪಾನಿನ ಕೋಸ್ಟ್ ಗಾರ್ಡ್ ವಿಮಾನಕ್ಕೆ ಅಪ್ಪಳಿಸಿತು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಘರ್ಷಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಎರಡು ವಿಮಾನಗಳು ಹೇಗೆ ಮತ್ತು ಯಾವ ಸಮಯದಲ್ಲಿ ಪರಸ್ಪರ ಡಿಕ್ಕಿಯಾದವು ಎಂಬುದನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಕೋಸ್ಟ್‌ಗಾರ್ಡ್ ಹೇಳಿದೆ.