ತುಮಕೂರು: ವಿ ಸೋಮಣ್ಣ ಸದ್ಯ ಬಿಜೆಪಿಯಲ್ಲಿ ಅಸಮಾಧಾನಗೊಂಡವರಾಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಇದರ ನಡುವೆ ವಿ ಸೋಮಣ್ಣ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗಳನ್ನು ಭೇಟಿ ಮಾಡಿ, ಮನಸ್ಸಿನ ಬೇಸರ ತೋಡಿಕೊಂಡಿದ್ದಾರೆ.
ಸಿದ್ದಗಂಗಾ ಶ್ರೀಗಳ ಜೊತೆಗೆ ಮಾತನಾಡಿದ ವಿ ಸೋಮಣ್ಣ, ವಿಧಾನಸಭಾ ಚುನಾವಣಾ ವೇಳೆ ನನಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಇಷ್ಟ ಇರಲಿಲ್ಲ. ಇಲ್ಲಿ ಬಿಟ್ಟು ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಿದ್ದೇ ನನ್ನ ದೊಡ್ಡ ಅಪರಾಧ. ಅಮಿತ್ ಶಾ ಮನೆಯಲ್ಲಿ ಕೂತುಕೊಂಡು ಜೀವ ತೆಗೆದರು. ಬರೋಬ್ಬರಿ ಎರಡು ಗಂಟೆಗಳ ಕಾಲ ಮನೆಯಲ್ಲಿಯೇ ಕುಳಿತುಕೊಂಡರು. ಆಗ ಏನು ಮಾಡಲಿ. ಆಗಲ್ಲ ಎಂದು ಹೇಳಿದೆ. ಬಳಿಕ ಪಿಎಂ ದೆಹಲಿಗೆ ಕರೆಸಿಕೊಂಡು, ನಾಲ್ಕು ದಿನ ಇರಿಸಿಕೊಂಡು, ನೀನು ನಿಂತುಕೋ ಎಂದು ಹೇಳಿದರು. ಆಗ ನಾನು ಏನು ಮಾಡಲಿ..? ಎಂದು ಸಿದ್ದಗಂಗಾ ಶ್ರೀಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿ ಸೋಮಣ್ಣ ಬಿಜೆಪಿಯನ್ನು ತೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಸಮಾಧಾನಿತ ಹಿರಿಯರನ್ನು ಸಮಾಧಾನ ಮಾಡಿ, ಪಕ್ಷ ಸಂಘಟನೆ ಮಾಡುವಂತ ಗಮನ ಹರಿಸುತ್ತಿದ್ದಾರೆ. ವಿ ಸೋಮಣ್ಣ ಅವರ ಮನಸ್ಸನ್ನು ಒಲಿಸುತ್ತಾರಾ ನೋಡಬೇಕಿದೆ.