ಹುಬ್ಬಳ್ಳಿ: ಲೋಕಸಭಾ ಚುನಾವಣೆಯನ್ನೇ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಜಗದೀಶಗ ಶೆಟ್ಟರ್ ಗೆ ಹೊಸ ಜವಬ್ದಾರಿಯನ್ನು ನೀಡಿದೆ. ಜಗದೀಶ್ ಶೆಟ್ಟರ್ ಕೂಡ ಕಾಂಗ್ರೆಸ್ ಪಕ್ಷ ಸಂಘಟನೆಯ ಜವಬ್ದಾರಿಯನ್ನು ಹೊತ್ತಿದ್ದಾರೆ. ಅದರ ಭಾಗವಾಗಿಯೇ ಹಲವರು ಈಗಾಗಲೇ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇನ್ನು ಸಾಕಷ್ಟು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಗೆ ಸೇರಿಸುವ ಯೋಜನೆ ಇತ್ತು. ಆದರೆ ಇದೀಗ ಹುಬ್ಬಳ್ಳಿಯ ರಾಜಕಾರಣದಲ್ಲಿ ಅದಲು – ಬದಲಿನ ಆಟ ಶುರುವಾಗಿದೆ.
ನೂತನವಾಗಿ ರಾಜ್ಯಾಧ್ಯಕ್ಷ ಪಟ್ಟಕ್ಕೇರಿರುವ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಆಕ್ಟೀವ್ ಆಗಿದ್ದಾರೆ. ಪಕ್ಷ ಸಂಘಟನೆ ಮಾಡುವುದಕ್ಕೆ ಹೊರಟಿದ್ದಾರೆ. ಅದರ ಭಾಗವಾಗಿಯೇ ಹುಬ್ಬಳ್ಳ – ಧಾರವಾಡ ಭಾಗದಲ್ಲಿ ಅಸಮಾಧಾನಗೊಂಡವರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೇರುವ ಹೊಸ್ತಿಲಿನಲ್ಲಿದ್ದವರನ್ನು ವಾಪಾಸ್ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಮಾಜಿ ಸಚಿವ ಮುನೇನಕೊಪ್ಪ ಲೋಕಸಭಾ ಚುನಾವಣೆಯ ಸ್ಪರ್ಧೆಗಾಗಿ ಕಾಂಗ್ರೆಸ್ ನತ್ತ ಮುಖ ಮಾಡಿದ್ದರು ಎನ್ನಲಾಗಿದೆ. ಇವರ ಜೊತೆಗೆ ಬಿಎಸ್ವೈ ಸಂಬಂಧಿ ಎಸ್ಐ ಚಿಕ್ಕನಗೌಡ್ರು ಕೂಡ ಕಾಂಗ್ರೆಸ್ ಹೋಗುವ ಯೋಜನೆಯಲ್ಲಿದ್ದರು. ಆದರೆ ಇದೀಗ ವಿಜಯೇಂದ್ರ ಅವರು ಮುನೇನಕೊಪ್ಪ ಅವರ ಮನವೊಲಿಕೆ ಮಾಡುವತ್ತ ಸಾಗಿದ್ದಾರೆ. ಲೋಕಸಭಾ ಚುನಾವಣಾ ಅಖಾಡಕ್ಕೆ ಈಗಿನಿಂದಲೇ ಸಿದ್ಧತೆ ನಡೆದಿದೆ. ಪಕ್ಷ ತೊರೆಯದಂತೆ ಮನವೊಲಿಕೆ ಮಾಡೋ ಮೂಲಕ ಸಂಘಟನೆಗೆ ವಿಜಯೇಂದ್ರ ಮುನ್ನುಡಿ ಬರೆಯುತ್ತಿದ್ದಾರೆ.
ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಅಖಾಡವೇ ಸೃಷ್ಟಿಯಾಗಲಿದೆ. ಜಗದೀಶ್ ಶೆಟ್ಟರ್ ಹಾಗೂ ವಿಜಯೇಂದ್ರ ಅವರ ನಡುವೆ ನೇರಾ ನೇರ ಫೈಟ್ ಶುರುವಾಗಲಿದೆ. ಕಾರ್ಯಕರ್ತರು, ಆಕಾಂಕ್ಷಿಗಳು ಯಾರ ಮಾತಿಗೆ ಮನವೊಲಿಕೆ ಆಗಲಿದ್ದಾರೆ ನೋಡಬೇಕಿದೆ.