ಬೆಂಗಳೂರು: ಇವತ್ತು ಭಜರಂಗಿ 2 ಸಿನಿಮಾ ಬಿಡುಗಡೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಆದ್ರೆ ಈ ನಡುವೆಯೇ ಪುನೀತ್ ರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದು, ಇಡೀ ಕುಟುಂಬಸ್ಥರನ್ನ ಆತಂಕಕ್ಕೆ ದೂಡಿದೆ. ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಜರಂಗಿ ಸಿನಿಮಾ ನೋಡ್ತಿದ್ದ ಶಿವಣ್ಣ ವಿಚಾರ ತಿಳಿದು, ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅನಾರೋಗ್ಯದ ಸ್ಥಿತಿ ಕಂಡು ಶಿವಣ್ಣ ಕಣ್ಣೀರು ಹಾಕಿದ್ದಾರೆ. ಮಗಳು ನಿವೇದಿತಾ ಕೂಡ ಓಡೋಡಿ ಆಸ್ಪತ್ರೆಗೆ ಬಂದಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪುನೀತ್ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ರವಿಚಂದ್ರನ್, ಯಶ್ ಸೇರಿದಂತೆ ನಿರ್ಮಾಪಕ ಕೆ ಪಿ ಶ್ರೀಕಾಂತ್, ಜಯಣ್ಣ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕುಟುಂಬಸ್ಥರಷ್ಟೇ ಅಲ್ಲ ಇಡೀ ರಾಜ್ಯಾದ್ಯಂತ ಅಭಿಮಾನಿಗಳು ಕೂಡ ಟೆನ್ಶನ್ ಆಗಿದ್ದಾರೆ. ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿ ಕಣ್ಣೀರು ಹಾಕುತ್ತಿದ್ದಾರೆ.