ಬೆಂಗಳೂರು: ಬಿಟ್ ಕಾಯಿನ್ ದಂಧೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ರಾಜ್ಯದ ಇಬ್ಬರು ಪ್ರಭಾವಿ ನಾಯಕರ ಭಾಗಿ ಬಗ್ಗೆ ವರದಿ ನೋಡಿದ್ದೆ. ಸುಮಾರು 10 ಸಾವಿರ ಕೋಟಿ ವಹಿವಾಟಿನ ಅನುಮಾನ ಇದೆ. ಇದು ಪ್ರಧಾನಿ ಕಾರ್ಯಾಲಯಕ್ಕೆ ಹೋಗಿದ್ದು, ಅಲ್ಲಿಂದ ವರದಿ ಕೇಳಲಾಗಿದೆ. ಈ ಬಿಟ್ ಕಾಯಿನ್ ಪ್ರಕರಣ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಭಾವಿಸುತ್ತೇನೆ ಅಂತ ಶಾಸಕ ರಾಮಲಿಂಗ ರೆಡ್ಡಿ ಹೇಳಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಸತ್ಯಾಂಶ ಹೊರಬಂದರೆ, ಅನೇಕ ನಾಯಕರ ಕುರ್ಚಿ ಅಲುಗಾಡುತ್ತದೆ. ಶೀಕ್ರಿ ಅವರನ್ನು ಬಂಧಿಸಲು ಸರ್ಕಾರ ಹಿಂದುಮುಂದೆ ನೋಡಿದ್ದು ಯಾಕೆ? ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡೆಸಬೇಕು. ಉಳಿದ ಯಾವುದೇ ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ ಎಂದರು.
ರಾಜ್ಯ ಸರ್ಕಾರ ಕನ್ನಡಕ್ಕಾಗಿ ನಾವು ಎಂದು ಕಾರ್ಯಕ್ರಮ ನಡೆಸುತ್ತಿದೆ. ಆದರೆ ಪ್ರವಾಸೋದ್ಯಮ ಸಚಿವಾಲಯ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಕಾರ್ಯಕ್ರಮ ಒಳ್ಳೆಯದೇ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಬರೆಯಲು, ಓದಬೇಕು’ ಎಂದರು.
ಬೊಮ್ಮಾಯಿ ಅವರು ಸಿಎಂ ಆಗಿ 100 ದಿನ ಪೂರೈಸುತ್ತಿದ್ದು, ಸಂಭ್ರಮಾಚರಣೆಗೆ ಮುಂದಾಗಿದ್ದಾರೆ ಎಂಬ ಬಗ್ಗೆ ಕೇಳಿದಾಗ, ‘ಬೊಮ್ಮಾಯಿ ಅವರು ಏನು ಮಾಡಿದ್ದಾರೆ ಅಂತಾ 100 ದಿನದ ಸಂಭ್ರಮ ಮಾಡುತ್ತಿದ್ದಾರೆ. ಅವರ ಸಾಧನೆ ಏನು ಎಂದು ಮಾಧ್ಯಮಗಳು ದಿನನಿತ್ಯ ತೋರಿಸುತ್ತಿವೆ’ ಎಂದರು.
ಉಪಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿದ್ದು, ಪಕ್ಷ ಗೆಲ್ಲುವ ವಿಶ್ವಾಸವಿದೆ. ಚುನಾವಣೆಯಲ್ಲಿ ಬೆಲೆ ಏರಿಕೆ ಬಹುತೇಕ ಚರ್ಚೆಯಾಗಿದ್ದು, ಜನ ಸರ್ಕಾರದ ವಿರುದ್ಧ ಬೆಲೆ ಏರಿಕೆ ವಿಚಾರವಾಗಿ ಬೇಸತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದರು’ ಎಂದರು.