ಚಿತ್ರದುರ್ಗ, (ಅಕ್ಟೋಬರ್. 28) : ಕನ್ನಡ ರಾಜ್ಯೋತ್ಸವದ ನಿಮಿತ್ತ “ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಗುರುವಾರ ಜಿಲ್ಲೆಯಾದ್ಯಂತ 13 ಸ್ಥಳಗಳಲ್ಲಿ ಸಾಮೂಹಿಕ ಕನ್ನಡ ಗೀತೆಗಳ ಗಾಯನ ನಡೆಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ “ಕನ್ನಡಕ್ಕಾಗಿ ನಾವು ಅಭಿಯಾನ” ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವು ಜಿಲ್ಲೆಯಾದ್ಯಂತ 13 ಸ್ಥಳಗಳಲ್ಲಿ ಸಾಮೂಹಿಕ ಗೀತ ಗಾಯನ ನಡೆಯಿತು. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಾಲಾ-ಕಾಲೇಜುಗಳ ಆವರಣ, ಐತಿಹಾಸಿಕ ಕೋಟೆಯ ಆವರಣದ ಮುಂದೆ ನಿಂತು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಸಾಮೂಹಿಕವಾಗಿ ಕನ್ನಡ ಗೀತೆಗಳ ಗಾಯನ ಮಾಡಲಾಯಿತು.
ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆಯೂ ಸೇರಿದಂತೆ ಕನ್ನಡ ನಾಡು-ನುಡಿ, ಸಂಸ್ಕøತಿಯ ವೈಭವ, ಕನ್ನಡದ ಶ್ರೇಷ್ಠತೆ ಸಾರುವಂತಹ ಡಾ.ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ, ಡಾ.ಕೆ.ಎಸ್.ನಿಸಾರ್ ಅಹಮದ್ ಅವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಮೂರು ಹಾಡುಗಳನ್ನು ಗಾಯನ ಮಾಡಿದ ನಂತರ ಚಿತ್ರದುರ್ಗ ಜಿಲ್ಲೆಯ ಶ್ರೇಷ್ಠತೆಯನ್ನು ಸಾರುವ ನಾಗರಹಾವು ಚಲನಚಿತ್ರದ ಗೀತೆ “ಕನ್ನಡ ನಾಡಿನ ವೀರರಮಣಿಯ” ಗೀತೆಯನ್ನು ಹಾಡಲಾಯಿತು.
ಜಿಲ್ಲೆಯಾದ್ಯಂತ 13 ಸ್ಥಳಗಳಲ್ಲಿ ಸಾಮೂಹಿಕ ಗಾಯನ: ಚಿತ್ರದುರ್ಗ ಜಿಲೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ, ಚಿತ್ರದುರ್ಗ ಕೋಟೆ ಮುಂಭಾಗ, ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಸದುರ್ಗ ಸರ್ಕಾರಿ ಪದವಿಪೂರ್ವ ಕಾಲೇಜು, ಮೊಳಕಾಲ್ಮುರು ಸರ್ಕಾರಿಪದವಿಪೂರ್ವ ಕಾಲೇಜು, ಹೊಳಲ್ಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು, ಹಿರಿಯೂರು ಸರ್ಕಾರಿ ಪದವಿಪೂರ್ವ ಕಾಲೇಜು, ಚಿತ್ರದುರ್ಗ ಎಸ್‍ಆರ್‍ಎಸ್ ಕಾಲೇಜು, ಎಸ್‍ಜೆಎಂಐಟಿ ಕಾಲೇಜು, ಅರವಿಂದ ಗಾರ್ಮೆಂಟ್ಸ್, ತಳಕು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಾಗೂ ಜಿಲ್ಲೆಯ 24 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಕನ್ನಡ ಗೀತೆ ಗಾಯನ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಬೇಕು ಎಂಬ ಉದ್ದೇಶದಿಂದ ನವೆಂಬರ್ 01ರ ಪೂರ್ವದಲ್ಲಿ ಒಂದು ವಾರಗಳ ಕಾಲ ಇಡೀ ರಾಜ್ಯಾದ್ಯಂತ, ದೇಶದ್ಯಾಂತ ಹಾಗೂ ವಿದೇಶಗಳಲ್ಲಿಯೂ ಸಹ ಕನ್ನಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಅಕ್ಟೋಬರ್ 24ರಿಂದ ಕನ್ನಡದ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೀತ ಗಾಯನ, ನೃತ್ಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ಸಹ ಈಗಾಗಲೇ ಮೂರು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಅಕ್ಟೋಬರ್ 31ರವರೆಗೆ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇಂದು ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಲಕ್ಷಕ್ಕೂ ಹೆಚ್ಚು ಕಂಠಗಳಲ್ಲಿ ಸಾಮೂಹಿಕವಾಗಿ ಗೀತ ಗಾಯನ ನಡೆಯುತ್ತಿದೆ. ಜಿಲ್ಲೆಯಲ್ಲಿ ಏಕಕಾಲದಲ್ಲಿ ಒಟ್ಟು 13 ಕಡೆ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿತ್ರದುರ್ಗ ನಗರದಲ್ಲಿ 7 ಕಡೆಗಳಲ್ಲಿ ಲಕ್ಷ ಕಂಠಗಳಲ್ಲಿ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವನ್ನು ಗಂಗಾಧರ್ ಮತ್ತು ತಂಡದವರು ನೆರವೇರಿಸಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.
ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯನವರು ಗೀತಗಾಯನ ಅಂಗವಾಗಿ ಸಂಕಲ್ಪ ಬೋಧಿಸಿದರು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ, ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕøತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ದನಾಗಿರುತ್ತೇನೆ ಎಂದು ಸಂಕಲ್ಪ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಡಿವೈಎಸ್‍ಪಿ ಪಾಂಡುರಂಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.