ಸುದ್ದಿಒನ್, ಹಿರಿಯೂರು, ನವೆಂಬರ್.06 : ಹಣವುಳ್ಳವರು ಬಹಳಷ್ಟು ಜನರಿದ್ದರೂ ಸಹಾಯ ನೀಡುವಂತಹ ಗುಣ ಕೆಲವರಿಗೆ ಮಾತ್ರ ಇರುತ್ತದೆ. ಅಂತವರಲ್ಲಿ ಕೆ. ಅಭಿನಂದನ್ ಒಬ್ಬರಾಗಿದ್ದರೇ, ತಾಯಿಯ ಮಾರ್ಗದರ್ಶನದಲ್ಲಿ ಬೆಳೆದು, ತಾಯಿಯ ಆಸೆಯ ಅನುಸಾರವಾಗಿ ಸಮಾಜ ಸೇವಕನಾಗಿ ದಾನ, ಧರ್ಮದ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಿಕ್ಷಣ ಸಂಯೋಜಕ ಸಿ. ಶಿವಾನಂದ್ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ವೇಣಕಲ್ ಗುಡ್ಡ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಜೀವದಾತೆ ಪೌಂಡೇಶನ್ ಸಂಸ್ಥೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು, ಸಮವಸ್ತ್ರ ವಿತರಣೆ ಹಾಗೂ ಜೀವದಾತೆ ಫೌಂಡೇಶನ್ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ವಿಕೆ ಗುಡ್ಡ ಗ್ರಾಮದಲ್ಲಿ ಹುಟ್ಟಿ, ಇದೇ ಶಾಲೆಯಲ್ಲಿ ಅಕ್ಷರ ಕಲಿತು ತಾನು ಓದಿದ ಶಾಲಾ ಕೊಠಡಿಗಳನ್ನು ದುರಸ್ಥಿ ಮಾಡಿಸಿ, ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿರುವುದು ಅಭಿನಂದನಾರ್ಹ ಎಂದು ಬಣ್ಣಿಸಿದರು.
ಇಂತಹ ಸಮಾಜ ಸೇವಕರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ಪೂಳಕಿತಗೊಳ್ಳುತ್ತವೆ ಹಾಗೂ ಮಕ್ಕಳ ಕಲಿಕೆಯ ಬೆಳವಣಿಗೆಯಲ್ಲಿ ಸರ್ವತೋಮುಖ ಬೆಳವಣಿಗೆಗೆ
ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಅಭಿನಂದನ್ ರವರ ಕುಟುಂಬಕ್ಕೆ ದೇವರು ಆರೋಗ್ಯ, ಐಶ್ವರ್ಯ ಕರುಣಿಸಲಿ ಎಂದು ಹಾರೈಸಿದರು.
ಜೀವದಾತೆ ಪೌಂಡೇಶನ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಕೆ. ಅಭಿನಂದನ್ ಮಾತನಾಡಿ ಕಲಿಕೆಯಲ್ಲಿ ವಿನಯ, ಶಿಸ್ತು ಮತ್ತು ತಾಳ್ಮೆ ಗುಣಗಳನ್ನು ಹೊಂದಿರುವ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ತೊಡಗುತ್ತಾರೆ. ಹುಟ್ಟು ಮತ್ತು ಸಾವಿನ ಮಧ್ಯೆ ಜೀವನದಲ್ಲಿ ಏನಾದರೂ ಸಾಧಿಸಿದರೆ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಬಾಲ್ಯದಲ್ಲೇ ನಾನು ಕಷ್ಟ ದುಃಖಗಳನ್ನು ಅನುಭವಿಸಿಕೊಂಡು ಬೆಳೆದಿದ್ದೇನೆ. ಸ್ವಾಮಿ ವಿವೇಕಾನಂದ, ಪುನೀತ್ ರಾಜ್ ಕುಮಾರ್, ಬಿವೈ ವಿಜಯೇಂದ್ರ ಹಾಗೂ ನನ್ನ ತಾಯಿಯ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಫೌಂಡೇಶನ್ ಪ್ರಾರಂಭಿಸಲಾಗಿದೆ. ತಂದೆ ತಾಯಿಗಳನ್ನು ಗೌರವ ಹಾಗೂ ಪ್ರೀತಿಯಿಂದ ಪೂಜಿಸುವವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ನನ್ನ ತಾಯಿಯ ಹೆಸರಿನಲ್ಲಿ ಜೀವದಾತೆ ಪೌಂಡೇಶನ್ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ. ಇಲ್ಲಿನ ವಿದ್ಯಾರ್ಥಿಗಳ ಅವಶ್ಯಕತೆಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ನೀಡಲು ನಮ್ಮ ಸಂಸ್ಥೆಯು ಸದಾ ನಿಮ್ಮೊಂದಿಗಿರುತ್ತದೆ ಎಂದು ಭರವಸೆ ನೀಡಿದರು.
ಶಿಕ್ಷಣ ಸಂಯೋಜಕ ಲೋಹಿತ್, ವಕೀಲ ಮಹಾಲಿಂಗಪ್ಪ, ಹನುಮಂತರಾಯಪ್ಪ, ಕರವೇ ಕೃಷ್ಣಪೂಜಾರಿ, ಎಂಎಂಎಸ್ ಮುರುಳಿ, ಗ್ರಾಮ ಪಂಚಾಯಿತಿ ಸದಸ್ಯರು, ಎಸ್.ಡಿ.ಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.