ಬೆಂಗಳೂರು: ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ರಸ್ತೆಗಳ ತುಂಬಾ ಗುಂಡಿಗಳು ಬಿದ್ದು ಜನರು ಪರದಾಡುತ್ತಿದ್ದರೆ, ಶಾಸಕ ದಿನೇಶ್ ಗುಂಡೂರಾವ್‌ರವರು ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಕಾಣೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜನರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‌ರವರನ್ನು ನೆನಪಿಸಿಕೊಂಡು ದಿನೇಶ್ ಗುಂಡೂರಾವ್‌ರವರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ ಕ್ಷೇತ್ರದ ಮೇಲೆ ಅವರಿಗಿರುವ ಅಸಡ್ಡೆಯಿಂದಾಗಿ ಅವರ ತಂದೆಯ ಹೆಸರಿಗೆ ಧಕ್ಕೆಯಾಗುತ್ತಿದೆ.
ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿ ಹೊರರಾಜ್ಯಗಳಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಗಾಂಧಿನಗರದ ಶಾಸಕ ಸ್ಥಾನಕ್ಕಿಂತ ಗೋವಾ ಮತ್ತು ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿಯೇ ಅವರಿಗೆ ಮುಖ್ಯವಾಗಿದೆ. ಪರಿಣಾಮವಾಗಿ ಮತ ನೀಡಿದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ದಿನೇಶ್ ಗುಂಡೂರಾವ್‌ರವರನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದರೆ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಚುನಾವಣೆ ವೇಳೆ ಆಶ್ವಾಸನೆಗಳನ್ನು ನೀಡಿ ಗೆದ್ದು, ಅಧಿಕಾರ ಸಿಕ್ಕ ನಂತರ ಅಸಹಾಯಕತೆ ವ್ಯಕ್ತಪಡಿಸುವ ಅವರಿಗೆ ನಾಚಿಕೆಯಾಗಬೇಕು. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನೆರೆ ರಾಜ್ಯಗಳಿಗೆ ಪಲಾಯನ ಮಾಡಿರುವ ಅವರು ಇನ್ನಾದರೂ ವಾಪಸ್ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಸಾಧ್ಯವಾಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಏನಾದರೂ ಮಾಡಿಕೊಳ್ಳಲಿ ಎಂದು ಮೋಹನ್ ದಾಸರಿಯವರು ದಿನೇಶ್ ಗುಂಡೂರಾವ್‌ರವರನ್ನು ತರಾಟೆಗೆ ತೆಗೆದುಕೊಂಡರು.