ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂದು ಶಾಮನೂರು ಶಿವಶಂಕರಪ್ಪ ಅವರು ಹೇಳಿದ ಮೇಲೆ, ಇಡೀ ರಾಜ್ಯ ರಾಜಕಾರಣದಲ್ಲಿಯೇ ಚರ್ಚೆ ಶುರುವಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಬೆಂಬಲ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರದಲ್ಲಿ ಲಿಂಗಾಯತರಿಗೆ ಎಷ್ಟು ಸ್ಥಾನಮಾಮವಿದೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿ ಹೇಳಿದ್ದಾರೆ. ಆದರೂ ಶಾಮನೂರು ಶಿವಶಂಕರಪ್ಪ ತಮ್ಮ ವಿಚಾರದಲ್ಲಿ ಪಟ್ಟು ಬಿಟ್ಟಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಸಂಬಂಧಿಸಿದಂತ ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅವರು ರಿಲೀಸ್ ಮಾಡಿದ ವರದಿ ಹೀಗಿದೆ:
ರಾಜ್ಯದಲ್ಲಿ 4 ಲಿಂಗಾಯತ ಡಿಸಿಗಳು, 6 ಲಿಂಗಾಯತ ಪೊಲೀಸ್ ವರಿಷ್ಠಾಧಿಕಾರಿ, 4 ಮುಖ್ಯ ಕಾರ್ಯಾನಿರ್ವಹಣಾಧಿಕಾರಿ, 7 ಮುಖ್ಯ ಎಂಜಿನಿಯರ್ ಸ್ಥಾನದಲ್ಲಿ ಇರುವುದನ್ನು ಸಿಎಂ ಸಿದ್ದರಾಮಯ್ಯ ದಾಖಲೆ ಸಮೇತ ತಿಳಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತರಿಗೆ ಗೌರವ ಸಿಗುತ್ತಿಲ್ಲ. ಡಿಸಿ, ಪೊಲೀಸ್ ನಂತಹ ಹುದ್ದೆಗಳ ಬಗ್ಗೆಯೂ ಹೇಳಿದ್ದರು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ತಲೆ ಬಿಸಿಯನ್ನೇ ಸೃಷ್ಟಿಸಿತ್ತು. ಆದರೆ ಈಗ ಸಿಎಂ ಸಿದ್ದರಾಮಯ್ಯ ಅದೆಲ್ಲವನ್ನು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈಗ ಲಿಂಗಾಯತ ಸಮುದಾಯದವರು ಎಲ್ಲೆಲ್ಲಾ ಒಳ್ಳೊಳ್ಳೆ ಹುದ್ದೆಯಲ್ಲಿದ್ದಾರೆಂಬುದನ್ನು ತಿಳಿಸಿದ್ದಾರೆ.