ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಭೆ ನಡೆದಿದೆ. ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಶಿವಮೊಗ್ಗ ಯಥಾಸ್ಥಿತಿಗೆ ಬಂದಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಶಿವಮೊಗ್ಗ ಸಂಪೂರ್ಣ ನಿಯಂತ್ರಣದಲ್ಲಿದೆ. ಈದ್ ಮಿಲಾದ್ ವೇಳೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪೊಲೀಸಿನವರ ಮೇಲೂ ಕಲ್ಲು ಎಸೆದಿದ್ದಾರೆ. ಅದನ್ನು ನಿಯಂತ್ರಣ ಮಾಡುವುದಕ್ಕೆ ಲಾಠಿ ಚಾರ್ಜ್ ಮಾಡಿದ್ದಾರೆ.
ಪೊಲೀಸರು ಈಗಾಗಲೇ40 ಕ್ಕೂ ಹೆಚ್ಚು ಜನರನ್ನು ಅರೆಸ್ಟ್ ಮಾಡಲಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲೂ ಧಕ್ಕೆ ಮಾಡಬಾರದು. ಅದು ಕಾನೂನು ಬಾಹಿರವಾಗಿದೆ. ಇಂಥದ್ದನ್ನು ನಮ್ಮ ಸರ್ಕಾರ ಸಹಿಸಲ್ಲ, ಹತ್ತಿಕ್ಕುತ್ತೇವೆ. ಪೊಲೀಸಿನವರು ಎಲ್ಲವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಶಾಂತಿ ನೆಲೆಸಿದೆ, ಶಾಂತಿ ಕಾಪಾಡುವುದಕ್ಕೆ ನಮ್ಮ ಸರ್ಕಾರ ಬದ್ಧ ಎಂದಿದ್ದಾರೆ.
ಇನ್ನು ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದು, ಮೆರವಣಿಗೆ ವೇಳೆ ಕತ್ತಿ ಗುರಾಣಿ ಪ್ರದರ್ಶನ ಮಾಡಿರಲಿಲ್ಲ. ಈ ಬಗ್ಗೆ ಮಾಹಿತಿ ಇಲ್ಲ. ಯಾರು ಏನಾದರೂ ಹೇಳಲಿ, ನಮಗೆ ವಾಸ್ತವ ಗೊತ್ತಿದೆ. ಪೊಲೀಸರು ಅಲರ್ಟ್ ಆಗಿದ್ದರು. ಯಾರನ್ನೂ ಹೊರಗಿನಿಂದ ಬರುವುದಕ್ಕೆ ಬಿಟ್ಟಿಲ್ಲ. ಪೊಲೀಸರು ನಾಲ್ಕು ಜನರನ್ನು ಅರೆಸ್ಟ್ ಮಾಡಿದ್ದಾರೆ. ಕಟ್ಟೆಚ್ಚರ ವಹಿಸಿದ್ದಾರೆ ಎಂದಿದ್ದಾರೆ.