ISKCON : ಬಿಜೆಪಿಯ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿ ಅವರು ಇಸ್ಕಾನ್ ಕುರಿತು ಮಾಡಿರುವ ಗಂಭೀರ ಆರೋಪ ಇದೀಗ ತೀವ್ರ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಸ್ಕಾನ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಮೇನಕಾ ಗಾಂಧಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದೆ. ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಇಸ್ಕಾನ್ ವಿರುದ್ಧ ಕೇಂದ್ರದ ಮಾಜಿ ಸಚಿವರೊಬ್ಬರು ಈ ರೀತಿ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದು ಇಸ್ಕಾನ್ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಂಶಗಳು:
• ಇಸ್ಕಾನ್ ಕುರಿತು ಮನೇಕಾ ಗಾಂಧಿ ಗಂಭೀರ ಆರೋಪ.
• ಇಸ್ಕಾನ್ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದೆ.
• ಇಸ್ಕಾನ್ ಹಸುಗಳನ್ನು ಮಾರಾಟ ಮಾಡುತ್ತಿದೆ ಎಂದು ಮೇನಕಾ ಗಾಂಧಿ ಹೇಳಿದ್ದರು.
ISKCON : ಮಾಜಿ ಕೇಂದ್ರ ಸಚಿವೆ, ಬಿಜೆಪಿ ಹಿರಿಯ ನಾಯಕಿ, ಹಾಲಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ಧ ಮಾಡಿದ್ದ ಗಂಬೀರವಾದ ಆರೋಪಗಳಿಗೆ ಇಸ್ಕಾನ್ ಸಂಸ್ಥೆಯು ಪ್ರತಿಕ್ರಿಯಿಸಿದೆ. ಈ ಹೇಳಿಕೆ ಅತ್ಯಂತ ದುರದೃಷ್ಟಕರ. ಈ ರೀತಿಯ ಆರೋಪ ಮಾಡಿದ ಮೇನಕಾ ಗಾಂಧಿ ವಿರುದ್ಧ ಇಸ್ಕಾನ್ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದೆ. ಈ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಇಸ್ಕಾನ್ ಸಂಸ್ಥೆಯು ತಿಳಿಸಿದೆ.
ಇಸ್ಕಾನ್ ಕುರಿತು ಮೇನಕಾ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದಂತೆ ಕೋಲ್ಕತ್ತಾದ ಇಸ್ಕಾನ್‌ನ ಉಪಾಧ್ಯಕ್ಷ ರಾಧಾ ರಾಮನ್ ದಾಸ್ ಪ್ರತಿಕ್ರಿಯಿಸಿದ್ದಾರೆ. ಮೇನಕಾ ಗಾಂಧಿಯವರ ಆರೋಪ ತುಂಬಾ ದುರದೃಷ್ಟಕರವಾಗಿದೆ. ಅವರ ಹೇಳಿಕೆ ಪ್ರಪಂಚದಾದ್ಯಂತದ ಇರುವ ಇಸ್ಕಾನ್ ಭಕ್ತರನ್ನು ನೋಯಿಸುವಂತಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮೇನಕಾ ಗಾಂಧಿ ರೂ. 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲು ಅಗತ್ಯ ಕಾನೂನು ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ರಾಧಾ ರಮಣ್ ದಾಸ್ ತಿಳಿಸಿದ್ದಾರೆ.
ಇಷ್ಟು ದೊಡ್ಡ ಸಂಸ್ಥೆಯಾಗಿರುವ ಇಸ್ಕಾನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡಿದ ಮಾಜಿ ಕೇಂದ್ರ ಸಚಿವೆ, ಸಂಸದೆ ಮೇನಕಾ ಗಾಂಧಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಸ್ಕಾನ್ ರಾಷ್ಟ್ರೀಯ ಪ್ರತಿನಿಧಿ ಯುಧಿಷ್ಟರ್ ಗೋವಿಂದ ದಾಸ್ ಅವರು ಈಗಾಗಲೇ ಮೇನಕಾ ಗಾಂಧಿಯವರ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿದ್ದಾರೆ. ಗೋವು ಮತ್ತು ಗೋವುಗಳ ರಕ್ಷಣೆಗೆ ಇಸ್ಕಾನ್ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು. ಇಸ್ಕಾನ್ ಸಂಸ್ಥೆಯು ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಗೋವುಗಳಿಗೆ ರಕ್ಣೆ ನೀಡುತ್ತಿದೆ ಎಂದರು.
ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿ ಅವರು ಕೃಷ್ಣನ ವಿಶ್ವದ ಅತ್ಯಂತ ಪ್ರಭಾವಿ ಪಂಥವಾದ ಇಸ್ಕಾನ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇಸ್ಕಾನ್ ದೇಶದ ಅತಿ ದೊಡ್ಡ ವಂಚಕ ಸಂಸ್ಥೆಯಾಗಿದೆ ಎಂದು ಆರೋಪಿಸಿದ ಅವರು, ಗೋಶಾಲೆ ಸ್ಥಾಪನೆ ಹಾಗೂ ಇತರೆ ನಿರ್ವಹಣಾ ವೆಚ್ಚಗಳಿಗೆ ಸರಕಾರದಿಂದ ಅನುದಾನ ಪಡೆಯುತ್ತದೆ. ಗೋಶಾಲೆ ನಿರ್ವಹಣೆಯ ಹೆಸರಿನಲ್ಲಿ ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗಂಬೀರವಾದ ಆರೋಪ ಮಾಡಿದ್ದರು.