ಬೆಂಗಳೂರು: ಸದ್ಯಕ್ಕೆ ಇರುವ ಕಾವೇರಿ ನೀರನ್ನು ಹಾಗೆಯೇ ಉಳಿಸಿಕೊಂಡರೆ ರೈತರಿಗೆ, ಕುಡಿಯುವುದಕ್ಕೆ ಅನುಕೂಲವಾಗಲಿದೆ. ಆದರೆ ಈಗಿರುವ ಅಷ್ಟೊ ಇಷ್ಟೋ ನೀರಿನಲ್ಲಿಯೇ ಪ್ರತಿದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ಬಿಡುವಂತೆ ಸುಪ್ರೀಂ ಕೋರ್ಟ್ ಕೂಡ ಸೂಚನೆ ನೀಡಿದೆ. ಹೀಗಾಗಿ ರೈತರು ರೊಚ್ಚಿಗೆದ್ದಿದ್ದಾರೆ. ಇನ್ನು ಕಾವೇರಿ ಗಲಾಟೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಅವರು ಸಂಪುಟ ಸಭೆ ಕರೆದಿದ್ದಾರೆ.
ಇಂದು ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕಾವೇರಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ. ಕಾವೇರಿ ನೀರು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಉಳಿಸಿಕೊಳ್ಳಬಹುದಾದ ಮಾರ್ಗ ಯಾವುದು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ಸಚಿವರ ಜೊತೆಗೆ ಚರ್ಚೆ ಮಾಡಲಿದ್ದಾರೆ.
ಮಳೆ ಕೊರತೆ ಇರುವ ಕಾರಣ ಕಾವೇರಿ ಕೊಳ್ಳದಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಕೆಆರ್ಎಸ್, ಹೇಮಾವತಿ, ಕಬಿನಿ, ಹಾರಂಗಿಯಲ್ಲಿ ಈಗ ಕೇವಲ 42.15 ಅಡಿಗಳಷ್ಟು ನೀರು ಮಾತ್ರ ಬಳಸಿಕೊಳ್ಳಲು ಸಾಧ್ಯವಿದೆ. ಆ ನೀರು ನಮ್ಮ ರಾಜ್ಯದ ಜನರಿಗೆ ಕುಡಿಯುವ ಹಾಗೂ ಕೃಷಿ ಕಾರ್ಯಗಳಿಗೆ ಸಾಕಾಗುವುದಿಲ್ಲ. ಇನ್ನು ತಮಿಳುನಾಡಿಗೂ ಬಿಡಬೇಕು ಎಂದರೆ ಕಷ್ಟಸಾಧ್ಯ ಅಂತಾನೇ ರೈತರು ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ.
ಮಂಡ್ಯ ಭಾಗದಲ್ಲಿ ಕಾವೇರಿಗಾಗಿ ರೈತರ ಹೋರಾಟ ಕಾವೇರಿದೆ. ರಾಜ್ಯದ ಜನರಲ್ಲೂ ಈ ಹೋರಾಟಕ್ಕೆ ಬೆಂಬಲ ಸೂಚಿಸಲು ರೈತರು ಮನವಿ ಮಾಡಿದ್ದಾರೆ. ಅದರಲ್ಲೂ ಬೆಂಗಳೂರಿನ ಮಂದಿಗೆ ಎಚ್ವರಿಕೆ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಿನ ಮಂದಿಗೆ ಕುಡಿಯುವ ನೀರಿಗೆ ಬೇಕಾಗಿರುವುದು ಕಾವೇರಿ. ಹೀಗಾಗಿ ರೈತರ ಜೊತೆಗೆ ಕೈಜೋಡಿಸಿ ಎಂದೇ ಹೇಳುತ್ತಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾ ಮೂಲಕವೇ ಬೆಂಬಲ ಸೂಚಿಸಿದ್ದಾರೆ.