ಸುದ್ದಿಒನ್ : ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನದ ಅಂತ್ಯದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿ ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ. 33 ಪ್ರತಿಶತ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದೆ ಎಂದು ಘೋಷಣೆ ಮಾಡಿದೆ.
ಮಹಿಳಾ ಮೀಸಲಾತಿ ಮಸೂದೆ ಪ್ರಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಲಿವೆ.
ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆ ನಡೆದಾಗಲೂ ಈ ಮೀಸಲು ಸ್ಥಾನಗಳಲ್ಲಿ ಬದಲಾವಣೆ ಮಾಡಲು ಸಚಿವ ಸಂಪುಟ ಮುಂದಾಗಿದೆ. 33 ಪ್ರತಿಶತ ಕೋಟಾದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಆಂಗ್ಲೋ-ಇಂಡಿಯನ್‌ಗಳಿಗೆ ಉಪ-ಮೀಸಲಾತಿಯನ್ನು ಮಸೂದೆಯು ಪ್ರಸ್ತಾಪಿಸುತ್ತದೆ.
ಪ್ರಸ್ತುತ, ಲೋಕಸಭೆಯು ಒಟ್ಟು 542 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 78 ಮಹಿಳೆಯರಿದ್ದಾರೆ. ರಾಜ್ಯಸಭೆಯಲ್ಲಿ 224 ಸದಸ್ಯರಿದ್ದು, ಈ ಪೈಕಿ 24 ಮಹಿಳೆಯರಿದ್ದಾರೆ.
ಮೂರು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ಸಿಕ್ಕಿಲ್ಲ. ಈ ಹಿಂದೆ ಹಲವು ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದರೂ ಪೂರ್ಣ ಬಹುಮತದ ಬೆಂಬಲ ಸಿಗದ ಕಾರಣ ಮಸೂದೆ ವಿಫಲವಾಗಿತ್ತು. ಈ ವಿಧೇಯಕದ ಬಗ್ಗೆ ಎಲ್ಲಾ ಪಕ್ಷಗಳು ಸಕಾರಾತ್ಮಕವಾಗಿದ್ದು, ಸಂಸತ್ತಿನ ಈ ವಿಶೇಷ ಅಧಿವೇಶನದಲ್ಲಿಯೇ ಮಹಿಳಾ ಮಸೂದೆಯನ್ನು ಮಂಡಿಸಲಾಗುವುದು. ಎಲ್ಲವೂ ಸುಸೂತ್ರವಾಗಿ ನಡೆದರೆ ಈ ಸಭೆಗಳಲ್ಲಿ ಮಸೂದೆಗೆ ಮೋಕ್ಷ ಸಿಗುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ಮಹಿಳಾ ಮೀಸಲಾತಿ ಮಸೂದೆ ಈಗಿಲ್ಲ. ಈ ಮಸೂದೆಯನ್ನು 1996 ರಲ್ಲಿ ಎಚ್‌ಡಿ ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರವು ಲೋಕಸಭೆಯಲ್ಲಿ ಮೊದಲ ಬಾರಿಗೆ ಮಂಡಿಸಿತು. ಆ ನಂತರ ವಾಜಪೇಯಿ ಸರ್ಕಾರ ಮತ್ತು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಮಸೂದೆಯನ್ನು ಮಂಡಿಸಲಾಯಿತು. ಆದರೆ ಈ ಮಸೂದೆಯನ್ನು ಸದನದಲ್ಲಿ ಅಂಗೀಕರಿಸಲಾಗಿಲ್ಲ. ಇದು ಅಂತಿಮವಾಗಿ 2010 ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆದರೆ ಲೋಕಸಭೆಯಲ್ಲಿ ಅಂಗೀಕರಿಸಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸಚಿವ ಸಂಪುಟ ವಿಧೇಯಕಕ್ಕೆ ನಿರ್ಣಯ ಕೈಗೊಂಡಿದೆ. ಮಹಿಳಾ ಮೀಸಲಾತಿ ವಿಧೇಯಕ ಹೊರತು ಪಡಿಸಿ ಇತರೆ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮಹಿಳಾ ಮೀಸಲಾತಿ ಮಸೂದೆ ಕುರಿತು ಪ್ರತಿಕ್ರಿಯಿಸಿ, ಮಹಿಳಾ ಮೀಸಲಾತಿ ಬೇಡಿಕೆ ಈಡೇರಿಸುವ ಧೈರ್ಯ ಮೋದಿ ಸರ್ಕಾರಕ್ಕೆ ಮಾತ್ರ ಇದೆ. ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ಇದು ಮತ್ತೊಮ್ಮೆ ಸಾಬೀತಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಈ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.