ಸುದ್ದಿಒನ್, ಚಿತ್ರದುರ್ಗ, ಸೆ.18 : ಶಾಲೆಗಳು ವಿದ್ಯೆ ನೀಡುವ ಪುಣ್ಯ ಸ್ಥಳಗಳು. ಶಿಕ್ಷಣವೇ ಇಂದಿನ ಮಕ್ಕಳ ಮುಂದಿನ ಸತ್ಪ್ರಜೆಗಳಾಗಿಸಿ ಮಹಾ ನಾಯಕರಾಗಿಸುವುದು. ಇಂದಿನ ಆಧುನಿಕ ತಂತ್ರಜ್ಞಾನಾಧಾರಿತ ಜಗತ್ತಿನಲ್ಲಿ ಶಾಲಾ ಶಿಕ್ಷಣಕ್ಕೆ ಬಹಳ ಮಹತ್ವ ಬಂದಿದೆ.
ವಿದ್ಯೆಯ ಸಿದ್ಧಿಗಾಗಿ ಮಕ್ಕಳನ್ನು ಶಾಲೆಗಳಲ್ಲಿ ಶಿಕ್ಷಕರ ಪಾಠದ ಜೊತೆ ಬೆಳಿಗ್ಗೆ ಸಂಜೆ ಟ್ಯೂಷನ್ ಕಳಿಸುವುದು ಇಂದು ಸಾಮಾನ್ಯವಾಗಿದೆ. ಹಾಗೆಯೇ ದೇವರ ಮೊರೆ ಹೋಗುವುದು ನಮ್ಮ ನಂಬಿಕೆ ಸಂಸ್ಕೃತಿ ಸಂಪ್ರದಾಯವಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಗಡಿ ಗ್ರಾಮವಾದ ತುಪ್ಪದಹಳ್ಳಿ. ಇಲ್ಲಿ ಗ್ರಾಮಸ್ಥರು ಮತ್ತು ಶಿಕ್ಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ವೃದ್ಧಿಗಾಗಿ ಆಯುರಾರೋಗ್ಯ ಸಿದ್ಧಿಗಾಗಿ ಶಾಲಾವರಣದಲ್ಲಿ ಶಾಶ್ವತವಾದ ವಿದ್ಯಾ ಗಣಪತಿಯ ಕಂಚಿನ ಮೂರ್ತಿಯನ್ನು ಗಣೇಶ ಚೌತಿಯಂದು ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಇದು ಹತ್ತು ವರ್ಷಗಳ ಹಿಂದಿನ ಸಂಕಲ್ಪ ಮತ್ತು ಶ್ರಮವಾಗಿದ್ದು ಇಂದು ಸಾರ್ಥಕವಾಗಿದೆ. ಇನ್ನು ನಿತ್ಯವು ವಿದ್ಯಾಗಣಪತಿಯ ಕೃಪಾಶೀರ್ವಾದದ ಮೂಲಕ ವಿದ್ಯಾದಾನವು ಮುಂದುವರೆಯಲಿದೆ.
ಶಾಶ್ವತ ವಿದ್ಯಾ ಗಣಪತಿ ಪ್ರತಿಷ್ಠಾಪನೆ ಮತ್ತು ದೇಗುಲ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಂಕರಮೂರ್ತಿಯವರ ಪರಿಶ್ರಮ ಇದೆ. ಅವರೇ ಹೇಳುವಂತೆ, ತುಪ್ಪದಹಳ್ಳಿ ಕೃಷಿಕರ ಗ್ರಾಮ. ಸಾಕಷ್ಟು ಅಡಿಕೆ ತೆಂಗು ವೀಳ್ಯದೆಲೆ ಮತ್ತು ಜೋಳ ಬೆಳೆಯುತ್ತಾರೆ. ಬಹುತೇಕವಾಗಿ ಹಣಕಾಸಿನಲ್ಲಿ ಸದೃಢಗೊಂಡ ಕುಟುಂಬಗಳಿವೆ. ಓದಿ ನೌಕರಿಗೆ ಹೋದವರು ಇದ್ದರು ಅವರ ಸಂಖ್ಯೆ ಬಹಳ ಕಡಿಮೆ.
ಪದೇ ಪದೇ ಬರಗಾಲ ಅತಿವೃಷ್ಟಿಯ ಮಳೆಯ ಜೂಜಾಟದಿಂದ ಕೃಷಿಕರ ಬದುಕು ದುಸ್ಥರವಾಗುತ್ತಿದೆ. ಮನೆಗೊಬ್ಬರಾದರು ಸರ್ಕಾರಿ ನೌಕರಿ ಪಡೆದವರಿದ್ದರೆ ಕುಟುಂಬಕ್ಕೆ ಸಂಕಷ್ಟದಿ ಬೆನ್ನೆಲುಬಾಗಿರುತ್ತಾರೆ. ಹಾಗಾಗಿ ಗ್ರಾಮದ ಎಲ್ಲ ಮಕ್ಕಳು ವಿದ್ಯಾವಂತರಾಗಲು ವಿನಯಸಂಪನ್ನರಾಗಲು ಪೋಷಕರು ಶಿಕ್ಷಕರ ಮಾರ್ಗದರ್ಶನದ ಜೊತೆಗೆ ದೇವರ ಅನುಗ್ರಹವು ಬೇಕು. ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಜ್ಞಾನ ಶಕ್ತಿ ವೃದ್ಧಿಗೆ ಸಂಕಲ್ಪಿಸಿ ಶಾಲಾವರಣದಲ್ಲಿ ವಿದ್ಯಾಗಣಪತಿ ದೇಗುಲ ನಿರ್ಮಿಸಲು ಆರಂಭಿಸಿದೆವು. ಹತ್ತು ವರ್ಷಗಳ ಕನಸು ಇಂದಿನ ಗಣೇಶ ಚೌತಿಯಂದು ನನಸಾಗಿದೆ ಎನ್ನುತ್ತಾರೆ.
ತುಪ್ಪದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೆ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪರಮೇಶ್ವರಪ್ಪ, ನಡುಲಮನೆ ರಾಜಪ್ಪ, ತಾಳಿಕಟ್ಟೆ ತಿಪ್ಪೇಸ್ವಾಮಿಯವರನ್ನು ಮಾತಾಡಿಸಿದಾಗ, ನಾವು ಕರ್ತವ್ಯ ನಿರ್ವಹಿಸುವಾಗ ನಿರ್ಧಾರ ಕೈಗೊಂಡ ವಿದ್ಯಾ ಗಣಪತಿ ದೇಗುಲ ನಿರ್ಮಾಣ ಇಂದು ನಮ್ಮ ಸಮ್ಮುಖದಲ್ಲೇ ಉದ್ಘಾಟನೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ತುಪ್ಪದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಭಾಷ್ ಚಂದ್ರರವರು ನಮ್ಮ ಗ್ರಾಮದ ಸರ್ಕಾರಿ ಶಾಲೆ ನಮಗೆಲ್ಲ ವಿದ್ಯಾದಾನ ಮಾಡಿದೆ. ನಾವೆಲ್ಲ ಸಮಾಜದಿ ಗೌರವದ ಸ್ಥಾನ ಗಳಿಸಿರುವುದು ಶಾಲಾ ಶಿಕ್ಷಣದಿಂದ. ನಮ್ಮ ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲ ಅನುಕೂಲ ಮಾಡಿಕೊಡುವೆವು ಎಂದು ಹೇಳಿದರು.
ದೇಗುಲ ಉದ್ಘಾಟನೆಗು ಮೊದಲು ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಬೀದಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮದ ಮಹಿಳೆಯರು ಪೂರ್ಣಕುಂಭ ಕಳಸ ಆರತಿ ಮತ್ತು ವಾದ್ಯವೃಂದದೊಂದಿಗೆ ವಿದ್ಯಾಗಣಪತಿಯ ಕಂಚಿನ ಪ್ರತಿಮೆಯ ಮೆರವಣಿಗೆ ನೆರವೇರಿಸಿದರು.
ವಿದ್ಯಾಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ, ಶಂಕರಮೂರ್ತಿ, ಸುಭಾಷ್ ಚಂದ್ರ, ಗೌಡರ ತಿಪ್ಪೇಶಪ್ಪ, ಹಾಲೇಶಪ್ಪ, ನಾಗೇಶಪ್ಪ, ಶಾಲಾ ಸಮಿತಿ ಅಧ್ಯಕ್ಷರಾದ ನಾಗರಾಜ, ಸದಸ್ಯರಾದ ಸತೀಶ, ಶಂಕರಪ್ಪ, ಪುಷ್ಪಾ, ಮಾಜಿ ಶಾಲಾ ಸಮಿತಿ ಅಧ್ಯಕ್ಷರಾದ ಎಮ್.ಬಿ.ಪ್ರಕಾಶ, ಶಾಂತವೀರಪ್ಪ, ಓಂಕಾರಪ್ಪ, ನಿವೃತ್ತ ಶಿಕ್ಷಕರಾದ ರಾಜಪ್ಪ, ಪರಮೇಶ್ವರಪ್ಪ, ತಿಪ್ಪೇಸ್ವಾಮಿ, ಪೋಷಕರಾದ ಜಯಣ್ಣ, ಎಲ್ ಐ ಸಿ ಶಿವಕುಮಾರ್, ಎನ್.ಆರ್.ತಿಪ್ಪೇಸ್ವಾಮಿ, ವಸಂತಕುಮಾರ, ವಿಶ್ವ, ಶರತ್, ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ, ಸಹಶಿಕ್ಷಕರಾದ ಬಸವರಾಜಪ್ಪ, ಮಹೇಶ್ವರಪ್ಪ, ಹೇಮಲತಾ, ಅನಿತಾ ಉಮೇಶ್, ಮಮತ, ದೀಪ, ದಿವ್ಯಾ ಅಕ್ಷರ ದಾಸೋಹ ಕಾರ್ಯಕರ್ತರಾದ ದ್ಯಾಮಕ್ಕ, ನೀಲಮ್ಮ, ಕಮಲಮ್ಮ, ಬಸಮ್ಮ ಮತ್ತು ಶಾಲಾ ವಿದ್ಯಾರ್ಥಿಗಳೆಲ್ಲರು ಇದ್ದರು.