ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆ.30 : ವಯಸ್ಸಾದ ತಂದೆ-ತಾಯಿಗಳನ್ನು ಮಕ್ಕಳು ಮನೆಯಿಂದ ಹೊರ ಹಾಕಿ ಕ್ರೂರತ್ವ ಮೆರೆಯಬಾರದು ಎನ್ನುವ ಸಂದೇಶ ಸಾರುವುದಕ್ಕಾಗಿ ರಾಮನಗರದ 24 ವರ್ಷದ ಯುವತಿ ಚಿತ್ರರಾವ್ ಒಂಟಿಯಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್‍ನಲ್ಲಿ ಪ್ರಯಾಣ ಹೊರಟಿದ್ದಾರೆ.
ನಗರದ ಹೊರವಲಯದ ಸೀಬಾರದ ಸಮೀಪವಿರುವ ಸರ್ದಾರ್ ಸೇವಾಲಾಲ್‍ಸ್ವಾಮಿ ಮಠದಲ್ಲಿ ಮಂಗಳವಾರ ಚಿತ್ರರಾವ್‍ರನ್ನು ಸ್ವಾಗತಿಸಲಾಯಿತು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಮ್ಮನ್ನು ಸಾಕಿ ಬೆಳೆಸಿದ ಹಿರಿಯರನ್ನು ಕಡೆಗಣಿಸಬೇಡಿ. ಇಂದಿನ ಪೀಳಿಗೆಗೆ ಹಿರಿಯರ ಅನುಭವ ಅವಶ್ಯಕತೆಯಿದೆ. ಎನ್ನುವ ಸಂದೇಶವನ್ನು ಸಾರುವುದಕ್ಕಾಗಿ ಸುಮಾರು 3500 ಕಿ.ಮೀ.ಬೈಕ್‍ರ್ಯಾಲಿ ಹೊರಟಿರುವ ಚಿತ್ರರಾವ್ ದಿಟ್ಟತನ ಹಾಗೂ ಧೈರ್ಯವನ್ನು ಎಲ್ಲರೂ ಮೆಚ್ಚಬೇಕು. ಅವರ ಪಯಣ ಸಾರ್ಥಕವಾಗಲಿ ಎಂದು ಹಾರೈಸಿದರು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡುತ್ತ ಮುಪ್ಪಿನ ಕಾಲದಲ್ಲಿ ತಂದೆ-ತಾಯಿಗಳನ್ನು ಕಡೆಗಣಿಸಿ ಮಕ್ಕಳು ವೃದ್ದಾಶ್ರಮಕ್ಕೆ ಸೇರಿಸುತ್ತಿರುವುದು ನೋವಿನ ಸಂಗತಿ. ಹಾಗಾಗಿ ಚಿತ್ರರಾವ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಸ್ವಂತ ಹಣ ಖರ್ಚು ಮಾಡಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್‍ರ್ಯಾಲಿ ಹೊರಟು ಎಲ್ಲರಿಗೂ ಮಾದರಿಯೆನಿಸಿಕೊಂಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇದಾರ ಕೇತೇಶ್ವರ ಮಠದ ಬಸವ ಇಮ್ಮಡಿ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ ತಂದೆ-ತಾಯಿ ಇಬ್ಬರು ಮಕ್ಕಳಿಗೆ ಎರಡು ಕಣ್ಣುಗಳಿದ್ದಂತೆ. ಚಿಕ್ಕಂದಿನಿಂದಲೂ ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲಹಿದ ಅಪ್ಪ ಅಮ್ಮನನ್ನು ದೂರ ಮಾಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರಂತ. ಕೆಲವರು ಮಕ್ಕಳು ನೀಡುವ ಕಿರುಕುಳವನ್ನು ಸಹಿಸಿಕೊಳ್ಳಲು ಆಗದೆ ಆತ್ಮಹತ್ಯೆ ಮಾಡಿಕೊಂಡಿರುವುದುಂಟು. ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುವ ಯುವತಿ ಚಿತ್ರರಾವ್ ಬೈಕ್‍ರ್ಯಾಲಿ ಹೊರಟು ಯುವ ಪೀಳಿಗೆಗೆ ತಂದೆ-ತಾಯಿಗಳನ್ನು ವೃದ್ದಾಶ್ರಮಕ್ಕೆ ಸೇರಿಸಬೇಡಿ ಎನ್ನುವ ಸಂದೇಶ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕ ಮೂರ್ತಿ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.