ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಸೇವಾಲಾಲ್ ಎನ್ನುವ ಹೆಸರಿಗೆ ಕಳಂಕ ಹಚ್ಚಿ ಜನಾಂಗಕ್ಕೆ ಅಪಕೀರ್ತಿ ತರುತ್ತಿರುವ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಠ ಬಿಟ್ಟು ತೊಲಗಲಿ. ಇಲ್ಲವಾದಲ್ಲಿ ಸಮಾಜದ ಮುಖಂಡರೆಲ್ಲಾ ಸೇರಿ ಹೊರದಬ್ಬುತ್ತೇವೆಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುರುಘಾಶರಣರಿಂದ ದೀಕ್ಷೆ ಪಡೆದಿರುವ ಸರ್ದಾರ್ ಸೇವಾಲಾಲ್ ಸ್ವಾಮೀಜಿ ದಾವಣಗೆರೆ ಜಿಲ್ಲೆ ದೇವರಬೆಳಕೆರೆಯ ಮುರಾರ್ಜಿ ಶಾಲೆಯ ಶಿಕ್ಷಕಿಯೊಬ್ಬಳನ್ನು ವಿವಾಹವಾಗಿ ಸಾಂಸಾರಿಕ ಜೀವನ ನಡೆಸುತ್ತ ಸಂತಾನ ಭಾಗ್ಯವನ್ನು ಪಡೆದಿದ್ದಾರೆ. ಕಾವಿ ಧರಿಸಿ ಇಂತಹ ಕೆಲಸ ಮಾಡುವ ಬದಲು ಮಠ ಬಿಟ್ಟು ಪತ್ನಿ ಮಕ್ಕಳೊಂದಿಗೆ ಸಂಸಾರಿಯಾಗಿ ಜೀವಿಸಲಿ. ಬಂಜಾರ ಜನಾಂಗವನ್ನು ದಿಕ್ಕುತಪ್ಪಿಸುವ ಒಬ್ಬರ ವಿರುದ್ದ ಮತ್ತೊಬ್ಬರನ್ನು ಎತ್ತಿಕಟ್ಟುವ ಕುಂತತ್ರಿ ಸ್ವಾಮಿ ನಮಗೆ ಬೇಕಿಲ್ಲ. ಜನಾಂಗ ತಲೆತಗ್ಗಿಸುವಂತಾಗಿರುವುದರಿಂದ ಕೂಡಲೆ ಮಠ ಬಿಟ್ಟು ತೊಲಗುವುದು ಕ್ಷೇಮ. ಇಲ್ಲವಾದಲ್ಲಿ ಜನಾಂಗದಿಂದ ಹೊರದಬ್ಬಿಸಿಕೊಳ್ಳಬೇಕಾಗುತ್ತದೆ ಎಂದರು.
ಬಂಜಾರ ಗುರುಪೀಠದ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಕೆ. ಮಾತನಾಡಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ವಿವಾಹವಾದಾಗಲೆ ಮುರುಘಾಮಠದ ಶರಣರ ಜೊತೆ ಸಮಾಲೋಚಿಸಿದಾಗ ಎಲ್ಲರ ಸಮ್ಮುಖದಲ್ಲಿಯೇ ಮಠ ಪೀಠಕ್ಕೆ ರಾಜೀನಾಮೆ ಪತ್ರ ಬರೆದುಕೊಟ್ಟಿದ್ದರೂ ಇನ್ನು ಸ್ವಾಮೀಜಿಯಾಗಿಯೇ ಮುಂದುವರೆಯುತ್ತಿರುವುದು ಯಾವ ನ್ಯಾಯ. ಕಾವಿ ಕಳಚಿ ಸಾಂಸಾರಿಕ ಜೀವನಕ್ಕೆ ಹೋಗಲಿ, ಹೊರಗೆ ದಬ್ಬಿಸಿಕೊಳ್ಳುವುದಕ್ಕಿಂತ ಮೊದಲೆ ಮರ್ಯಾದೆಯಿಂದ ಪೀಠ ತ್ಯಜಿಸಲಿ. ಈತನ ಅನೈತಿಕ ಚಟುವಟಿಕೆಗಳು ಸಮಾಜಕ್ಕೆ ಮಾರಕವಾಗಿವೆ. ಟ್ರಸ್ಟಿಗೆ ಮಾತ್ರ ರಾಜಿನಾಮೆ ನೀಡಿದ್ದೇನೆ ಹೊರತು ಪೀಠಕ್ಕಲ್ಲ ಎನ್ನುವ ರಾಗ ತೆಗೆಯುತ್ತಿರುವುದನ್ನು ಜನಾಂಗ ಸಹಿಸುವುದಿಲ್ಲ. ಇದು ಸ್ವಾಮೀಜಿಗೆ ಶೋಭೆಯಲ್ಲ ಎಂದು ಹೇಳಿದರು.
ಲಂಬಾಣಿ ಸಮಾಜದ ಮುಖಂಡ ಹಾಗೂ ಚನ್ನಗಿರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲೇಶ್‍ನಾಯ್ಕ ಮಾತನಾಡುತ್ತ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಶಿಕ್ಷಕಿಯನ್ನು ವಿವಾಹವಾಗಿರುವುದು ಫೋಟೋ ಸಮೇತ ಸಿಕ್ಕಿದೆ. ಈ ದಾಖಲೆ ಸುಳ್ಳು ಎನ್ನುವವರಿಗೆ ಒಂದು ಲಕ್ಷ ರೂ.ಬಹುಮಾನ ಕೊಡುತ್ತೇನೆ. ಮಠದಲ್ಲಿದ್ದುಕೊಂಡು ವಿವಾಹವಾದಾಗ ಮುರುಘಶರಣರ ಬಳಿ ಹೋಗಿ ಮುಖಂಡರುಗಳೆಲ್ಲಾ ಮಾತನಾಡಿದ್ದೇವೆ.
ಜನಾಂಗ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಂಸಾರಿಯಾಗಿ ಜೀವನ ಸಾಗಿಸಲಿ. ಇಲ್ಲ ಮಠ ಬಿಟ್ಟು ತೊಲಗಲಿ. ಜನಾಂಗದಲ್ಲಿ ಒಬ್ಬರ ವಿರುದ್ದ ಮತ್ತೊಬ್ಬರನ್ನು ಎತ್ತಿಕಟ್ಟಿ ದ್ವೇಷ ಬಿತ್ತುತ್ತಿರುವ ಇಂತಹ ಸ್ವಾಮೀಜಿಗೆ ಮುರುಘಾಮಠ ಆಶ್ರಯತಾಣವಾಗಬಾರದು ಎನ್ನುವುದು ನಮ್ಮ ಉದ್ದೇಶ. ಇಂತಹ ಕಾಮುಕ ಸ್ವಾಮಿಯನ್ನು ಸೇವಾಲಾಲ್ ರೂಪದಲ್ಲಿ ನಾವುಗಳು ನೋಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಂಜಾರ ಗುರುಪೀಠದ ಕಾರ್ಯಾಧ್ಯಕ್ಷ ರಾಜಾನಾಯ್ಕ ಆರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.